ಯಾದಗಿರಿ: ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ಮೇಟಿಯವರ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ರದ್ದಾದ ಹಿನ್ನೆಲೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆಗೆ ಸಂಬಂಧಿಸದಂತೆ ಮನವೊಲಿಸಿದ್ದಾರೆ.
ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. ಆದ್ರೆ ಸ್ಥಳೀಯ ಜಿಲ್ಲಾ ಮುಖಂಡರಗಳಿಗೆ, ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಿಗೆ ಹಾಗೂ ಜಿಲ್ಲಾಧ್ಯಕ್ಷರಿಗೆ ಮಾಹಿತಿ ನೀಡದೆ ನೇರವಾಗಿ ಬೆಂಗಳೂರಿನಲ್ಲಿ ಸೇರ್ಪಡೆಯಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಭೀಮಣ್ಣ ಮೇಟಿಯವರ ಪ್ರಾಥಮಿಕ ಸದಸ್ಯತ್ವ ರದ್ದಾಗಿತ್ತು.
ಆ ಹಿನ್ನೆಲೆ ಭೀಮಣ್ಣ ಮೇಟಿ ಮತ್ತೊಮ್ಮೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಸ್ಥಳೀಯ ಶಾಸಕ ಶರಣಬಸಪ್ಪ ದರ್ಶನಾಪುರ ಜತೆ ನಾನು ಮಾತನಾಡುತ್ತೇನೆ. ಪಕ್ಷ ಸೇರ್ಪಡೆಗೆ ಯಾವುದೇ ವಿರೋಧ ವ್ಯಕ್ತಪಡಿಸದಂತೆ ನಾನು ಅವರಿಗೆ ಹೇಳುತ್ತೇನೆ. ನೀವು ನೇರವಾಗಿ ಜಿಲ್ಲೆಗೆ ಹೋಗಿ ಜಿಲ್ಲೆಯ ಅಭಿವೃದ್ಧಿ ಕೆಲಸಕ್ಕೆ ಸಹಕಾರಿಯಾಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ.