ಯಾದಗಿರಿ: ಶಾಂತಿ ಸೌಹಾರ್ದತೆ ಸಾರುವ ರಂಜಾನ್ ಹಬ್ಬವನ್ನು ಕೋವಿಡ್‌ನಿಂದ ಎರಡು ವರ್ಷಗಳಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈ ಸಲ ಕೋವಿಡ್ ಪರಿಣಾಮವಿಲ್ಲ. ಎಲ್ಲೆಡೆ ಮುಸ್ಲಿಂರು ಒಗ್ಗಟ್ಟಾಗಿ ಹಬ್ಬ ಆಚರಿಸುತ್ತಿರುವುದು ವಿಶೇಷ. ಜಿಲ್ಲೆಯ ಯರಗೋಳ ಗ್ರಾಮದಲ್ಲಿ ಮಂಗಳವಾರ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ವಿಶಿಷ್ಟವಾಗಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ಆಚರಿಸಿದರೆ, ಬಸವ ಭಕ್ತರು ಮುಸ್ಲಿಂ ಬಾಂಧವರಿಗೆ ಹೂಗುಚ್ಛ ನೀಡಿ ರಂಜಾನ್ ಶುಭಾಶಯ ತಿಳಿಸಿದರು.
ಗ್ರಾಮದ ಪೊಲೀಸ್ ಠಾಣೆ ಸಿಬ್ಬಂದಿ ಶರಣಗೌಡ ಮುಸ್ಲಿಂ ಬಾಂಧವರಿಗೆ ತಮ್ಮ ಪೊಲೀಸ್ ಠಾಣೆಗೆ ಆಮಂತ್ರಿಸಿ ಎಲೆ, ಅಡಿಕೆ, ತಾಂಬೂಲ ನೀಡಿ, ರಂಜಾನ್ ಹಬ್ಬದ ಶುಭಾಶಯ ಕೋರಿದರು. ಪ್ರಾಚೀನ ಕಾಲದಲ್ಲಿ ಗ್ರಾಮದ ಪೊಲೀಸ್ ಪಾಟೀಲ್ ಮನೆತನದವರು ರಂಜಾನ್ ಮುಸ್ಲಿಂ ಬಾಂಧವರಿಗೆ ಮನೆಗೆ ಆಮಂತ್ರಿಸಿ ಎಲೆ, ಅಡಿಕೆ ತಾಂಬೂಲ ನೀಡಿ ರಂಜಾನ್ ಹಬ್ಬದ ಶುಭಾಶಯಗಳು ತಿಳಿಸುತ್ತಿದ್ದರು. ಕಾಲಕ್ರಮೇಣ ಪೊಲೀಸ್ ಠಾಣೆಯಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಹೊರಟಿದ್ದಾರೆ.
ಹೂಗುಚ್ಛ ನೀಡಿ ಶುಭಾಶಯ: ಬಸವ ಜಯಂತಿ, ರಂಜಾನ್ ಹಬ್ಬ ಒಂದೇ ದಿನ ಆಗಮಿಸಿರುವುದರಿಂದ ಗ್ರಾಮದ ಬಸವ ಭಕ್ತರು ಮುಸ್ಲಿಂ ಬಾಂಧವರಿಗೆ ವಿಶಿಷ್ಟವಾಗಿ ಸ್ವಾಗತಿಸಿದರು. ಮುಸ್ಲಿಂ ಬಾಂಧವರು ಈದ್ಗಾ ಮೈದಾನದಿಂದ ರಂಜಾನ್ ನಮಾಜ ಮುಗಿಸಿಕೊಂಡು ಬರುವಾಗ ಬಸವ ಭಕ್ತರು ಬಸ್ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಮುಸ್ಲಿಂ ಬಾಂಧವರು ಬಸವ ಭಕ್ತರ ಹೂವಿನ ಸ್ವಾಗತ ಸ್ವೀಕರಿಸಿ, ಒಬ್ಬರಿಗೊಬ್ಬರು ಅಪ್ಪಿಕೊಂಡು, ಸಮಾನತೆಯ ಹರಿಕಾರ ಬಸವಣ್ಣನನ್ನು ನೆನೆದರು.
ಇದನ್ನೂ ಓದಿ: ಕೊಳ್ಳೇಗಾಲದಲ್ಲಿ ರಂಜಾನ್ ಹಬ್ಬದಂದೇ ಎರಡು ಗುಂಪುಗಳ ನಡುವೆ ಮಾರಾಮಾರಿ