ಸುರಪುರ(ಯಾದಗಿರಿ): ತಾಲೂಕಿನ ಆಲ್ಹಾಳ ಗ್ರಾಮದಲ್ಲಿ ದಲಿತಪರ ಹೋರಾಟಗಾರನೋರ್ವನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ನಿನ್ನೆ ತಾಲೂಕಿನ ಕೆಂಭಾವಿ ಬಳಿಯ ಆಲ್ಹಾಳ ಗ್ರಾಮದಲ್ಲಿ ದಲಿತಪರ ಹೋರಾಟಗಾರನ ಮೇಲೆ ಅನ್ಯ ಕೋಮಿನವರಿಂದ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ದಲಿತ ಹಕ್ಕುಗಳ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಆಲ್ಹಾಳ ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡ ಅವರು ಸದ್ಯ ಶಹಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಗಾಯಾಳು ಪ್ರಕಾಶ ಆಲ್ಹಾಳ ಮಾತನಾಡಿ, ನಮ್ಮ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗಳು ನಡೆದು, ಚುನಾವಣೆಯಲ್ಲಿ ನಮ್ಮ ಚಿಕ್ಕಪ್ಪನವರು ಜಯಶೀಲರಾಗಿ ಸಂಘದ ಅಧ್ಯಕ್ಷ ಸ್ಥಾನ ದೊರಕಿತ್ತು. ಇದರಿಂದ ನಮ್ಮ ಎದುರು ಸೋತ ಅನ್ಯ ಕೋಮಿನ ವ್ಯಕ್ತಿ ನನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಹಾಗಾಗಿ ಪ್ರಕರಣ ದಾಖಲಿಸಿ ಘಟನೆ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ವಿನಂತಿಸಿದರು.