ಯಾದಗಿರಿ : ಶಹಾಪುರ ನಗರದ ಎಸಿಬಿ ಅಧಿಕಾರಿಗಳು ಗುತ್ತಿಗೆದಾರನ ಮನೆ ಮೇಲೆ ದಾಳಿ ನಡೆಸಿದ್ದಾರೆ. ವಿದ್ಯಾರಣ್ಯ ಸ್ಕೂಲ್ ಮುಂಭಾಗದಲ್ಲಿರುವ ಗುತ್ತಿಗೆದಾರ ಖಂಡಪ್ಪಗೌಡರ ಮನೆ ಮೇಲೆ ಈ ದಾಳಿ ನಡೆದಿದೆ. ಅಧಿಕಾರಿಗಳು 5 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಖಲೆ ಪರಿಶೀಲನೆ ಕಾರ್ಯ ಚುರುಕಾಗಿ ನಡೆದಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಂಡಪ್ಪಗೌಡ ಅವರು ಗೋಕಾಕ್‌ದ ಕೌಜಲಗಿ ವಿಭಾಗದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಪಾಟೀಲ್ ಅವರ ಸಹೋದರ ಎಂದು ತಿಳಿದು ಬಂದಿದೆ. ಅಲ್ಲದೆ ಅವರಿಗೆ ಸಂಬಂಧಿಸಿದ ಯರಗಟ್ಟಿ, ಬೆಂಗಳೂರು, ಧಾರವಾಡ, ಕಲಬುರಗಿ ಮನೆಗಳ ಮೇಲೂ ಏಕ ಕಾಲಕ್ಕೆ ಈ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಎಸಿಬಿ ದಾಳಿ: ಲೋಕೋಪಯೋಗಿ ಎಇಇ ಮನೆಯಲ್ಲಿ ಚಿನ್ನದ ಗಟ್ಟಿ ಪತ್ತೆ!
ಬೀದರ್ ಹಾಗೂ ಚಿಟಗುಪ್ಪ ತಾಲೂಕಿನ ಉಡಬಾಳ ಮನೆ ಮೇಲೆಯೂ ಎಸಿಬಿ ದಾಳಿ ನಡೆದಿದೆ. ಕಲಬುರಗಿ ಎಸಿಬಿ ಡಿವೈಎಸ್ಪಿ ಸಂತೋಷ ಬನ್ನಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಇನ್ನೊಂದೆಡೆ ಯಾದಗಿರಿಯ ಸಾಮಾಜಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ರಮೇಶ ಕನಕಟ್ಟಿ ಅವರ ಮನೆ ಮೇಲೂ ಸಿಪಿಐ ಬಾಬಾಸಾಹೇಬ್ ನೇತೃತ್ವದಲ್ಲಿ ದಾಳಿ ನಡೆಸಿ, ಕಡತ ಪರಿಶೀಲನೆ ನಡೆಸಲಾಗಿದೆ. ಎಸಿಬಿ ದಾಳಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ ಕುಳಾ ಮತ್ತು ಸಿಬ್ಬಂದಿ ಇದ್ದರು.