ಯಾದಗಿರಿ: ಇದೊಂದು ವಿಶಿಷ್ಟ ರೀತಿಯ ಮದುವೆ. ಮಂತ್ರಘೋಷಗಳಿರಲಿಲ್ಲ, ಬ್ಯಾಂಡ್‌ಗಳ ಸದ್ದು ಮೊಳಗಲಿಲ್ಲ. ಮದುವೆಯ ವೇದಿಕೆಗೂ ಯಾವುದೇ ಅಲಂಕಾರವಿರಲಿಲ್ಲ, ಮಾಂಗಲ್ಯವನ್ನು ಕಟ್ಟದೆ ಮದುವೆಗೆ ಶುಭ ಹಾರೈಸಲು ಆಗಮಿಸಿದ್ದ ಹಿರಿಯರು, ಕಿರಿಯರು, ಸ್ನೇಹಬಂಧುಗಳು, ವಿವಿಧ ಸಂಘಟನೆಗಳ ಹೋರಾಟಗಾರರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ನವ ಜೋಡಿ ಸರಳವಾಗಿ ವಿವಾಹ ಬಂಧನಕ್ಕೊಳಗಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಅಚ್ಚರಿಯೆಂದರು ಹೌದು, ಎಂ.ಎ. ಸ್ನಾತಕೋತ್ತರ ಪದವೀಧರ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿಯಾದ ರಾಮಲಿಂಗಪ್ಪ ಬಿ.ಎನ್. ಹಾಗೂ ಕಲಬುರಗಿ ಮೂಲದ ಸ್ತಾತಕೋತ್ತರ ಪದವೀಧರೆ, ಎಐಡಿಎಸ್‌ಒ ಕಲಬುರಗಿ ಜಿಲ್ಲಾ ಸಮಿತಿ ಕಾರ್ಯಕಾರಿಣಿ ಸದಸ್ಯೆ ಶಿಲ್ಪಾ ಬಿ.ಕೆ. ಅವರು ಪರಸ್ಪರ ಇಷ್ಟಪಟ್ಟು ಪ್ರೀತಿಸಿ ಸರಳವಾಗಿ ಯಾದಗಿರಿ ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸತಿ-ಪತಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಹೋರಾಟಗಾರರಿಬ್ಬರ ಅಂತರ್ಜಾತಿ ವಿವಾಹ.. ಸಂಪ್ರದಾಯ, ಜಾತಿಯನ್ನು ಮೀರಿ, ಅಗ್ನಿಸಾಕ್ಷಿಯನ್ನು ದೂರವಿಟ್ಟು ಮನಸಾಕ್ಷಿಯನ್ನು ಅಪ್ಪಿ ಈ ಯುವ ಜೋಡಿ ಅರ್ಥಪೂರ್ಣವಾಗಿ ಮದುವೆ ಮಾಡಿಕೊಂಡರು. ಹೋರಾಟಗಾರರಿಬ್ಬರ ಅಂತರ್ಜಾತಿ ವಿವಾಹವು ನಿರ್ಭಯವಾಗಿ ನಡೆಯಿತು. ಹಾರೈಕೆಯೇ ಅಕ್ಷತೆಗಳಾಗಿ ಬದಲಾಗಿ ನವದಂಪತಿಗೆ ಆರ್ಶೀವದಿಸಿದವು.
ವೈಚಾರಿಕ ಕ್ರಾಂತಿ ಜೀವಂತವಾಗಿದೆ.. ಅಖಿಲ ಭಾರತ ರೈತ ಕೃಷಿ ಸಂಘದ ರಾಜ್ಯ ಕಾರ್ಯದರ್ಶಿ ಎಂ. ಶಶಿಧರ ಈ ಬಗ್ಗೆ ಮಾತನಾಡಿ, ಸಮಾಜದ ಬದಲಾವಣೆಗಾಗಿ ಹೋರಾಡುತ್ತಿರುವ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದಲ್ಲಿ ಇಂತಹ ವೈಚಾರಿಕ ಕ್ರಾಂತಿ ಜೀವಂತವಾಗಿದೆ. ಮೌಢ್ಯ, ಗೊಡ್ಡು ಸಂಪ್ರದಾಯ, ಜಾತಿ ಮತ್ತು ಧರ್ಮಾಂಧತೆ ಇವುಗಳನ್ನು ಧಿಕ್ಕರಿಸುವ ಎದೆಗಾರಿಕೆ ಯುವ ಜನರಲ್ಲಿ ಬರಬೇಕು. ಅಗ್ನಿ ಸಾಕ್ಷಿ ಮದುವೆಗಳು ಮುರಿದು ಬೀಳುತ್ತಿವೆ. ಮನಸಾಕ್ಷಿ ಮದುವೆಗಳು ಗೆಲ್ಲುತ್ತಿವೆ. ಇಂತಹ ಸರಳ ಮತ್ತು ಅಂತರ್ಜಾತಿ ಮದುವೆಗಳಿಂದ ಸಹಜವಾಗಿ ಪೋಷಕರಿಂದ ಪ್ರತಿರೋಧ ಬರುತ್ತದೆ. ಬದಲಾವಣೆಯ ಗಾಳಿ ಬೀಸುವಾಗ ನೋವುಗಳನ್ನು ಎದುರಿಸಬೇಕಾಗಿದ್ದು ಅನಿವಾರ್ಯವಾಗಿದೆ ಎಂದರು.
ಜಾಗೃತಿ ಬ್ಯಾನರ್ ಹಾಕಿ ಮದುವೆಯಾದ ವಿಶೇಷ ದಂಪತಿ: ಇತ್ತೀಚಿನ ದಿನಗಳಲ್ಲಿ ಮದುವೆಯೆಂದರೆ ಅದು ಎರಡು ಮನಸ್ಸುಗಳನ್ನು ಒಂದು ಮಾಡುವ ಸಂಪ್ರದಾಯಕ್ಕಿಂತ ಹಣ ಅಂತಸ್ತನ್ನು ಬಂಧು ಬಳಗ ಊರವರಿಗೆ ತೋರಿಸಿಕೊಳ್ಳಲಿರುವ ಕಾರ್ಯಕ್ರಮವಾಗಿದೆ. ಅನಗತ್ಯ ದುಂದು ವೆಚ್ಚ ಮಾಡಿ ವಿವಾಹ ಸಮಾರಂಭ ಮಾಡುವುದು ಮಾಮೂಲಿಯಾಗಿದೆ. ಆದರೆ ಇದಕ್ಕೆಲ್ಲ ತದ್ವಿರುದ್ಧವಾಗಿ ಬಾಗಲಕೋಟೆಯಲ್ಲಿ ಒಂದು ಜೋಡಿ ಸರಳವಾಗಿ ಸಮಾಜಕ್ಕೆ ಜಾಗೃತಿ ಮೂಡಿಸುವಂತ ಬ್ಯಾನರ್ ಅನ್ನು ತಮ್ಮ ಮದುವೆಯ ಕಲ್ಯಾಣ ಮಂಟಪದ ಎದುರು ಹಾಕಿ ಎಲ್ಲರಿಗೂ ಮಾದರಿಯಾಗುವಂತೆ ಇದೇ ಫೆ. 10 ಕ್ಕೆ ಮದುವೆಯಾಗಿದ್ದಾರೆ.
ಬಾಗಲಕೋಟೆ ನಗರದ ಮುರಗೋಡ ಕಲ್ಯಾಣ ಮಂಟಪದಲ್ಲಿ ಸಂತೋಷ ಹಾಗೂ ಶಿಲ್ಪಾ ಜೋಡಿಯೂ ತಮ್ಮ ಮದುವೆ ಸಮಾರಂಭದಂದು ಎಲ್ಲರಿಗೂ ಸ್ವಾಗತಿಸುವ ಬ್ಯಾನರ್ನಲ್ಲಿ ‘‘ ದೇಶದ ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರಿಕರಣವಾಗದಂತೆ ನೋಡಿಕೊಂಡು ಬಂದು ಅವುಗಳನ್ನು ಸೇವಾ ವಲಯದಲ್ಲಿ ತಂದು ಭಾರತದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತೀ ಅಗ್ಗದಲ್ಲಿ ದೊರಕುವಂತೆ ಮಾಡಬೇಕು, ಇದು ಸರ್ಕಾರ ಮತ್ತು ಸಮಾಜದ ಆಧ್ಯ ಕರ್ತವ್ಯವಾಗಲಿ’’ ಎಂದು ಜಾಗೃತಿ ವಾಕ್ಯಗಳನ್ನು ಹಾಕಿದ್ದು ಎಲ್ಲರ ಗಮನ ಸೆಳೆದಿತ್ತು.
ಇದನ್ನೂ ಓದಿ; ಮದುವೆ ಸಮಾರಂಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸಿ ವಿಭಿನ್ನ ಮದುವೆಯಾದ ಜೋಡಿ..