ಗುರುಮಠಕಲ್ : ಕೋವಿಡ್-19 ದೃಢಪಟ್ಟು ಉಸಿರಾಟ, ದಮ್ಮು ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ವೃದ್ಧೆಯೊಬ್ಬರನ್ನು ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಮೈತ್ರಿ ಅವರ ಮಾರ್ಗದರ್ಶನದಲ್ಲಿ ವೈದ್ಯರ ತಂಡವು ಸುಮಾರು 20 ದಿನಗಳವರೆಗೆ ಕಾಳಜಿ ವಹಿಸಿ ಅವರ ಆರೋಗ್ಯ ಸುಧಾರಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಸೇಡಂ ತಾಲೂಕಿನ ಕೋಲ್ಕುಂದಾ ಗ್ರಾಮದ ದೇವಮ್ಮ ಗಂಡ ಮೊಗಲಪ್ಪ(75) ಎಂಬುವರಿಗೆ ಕೊರೊನಾ ಸೋಂಕು ತಗುಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ 20 ದಿನಗಳ ಹಿಂದೆ ಚಿಕಿತ್ಸೆಗೆ ದಾಖಲಾಗಿದ್ದರು.
ಉಸಿರಾಟ ಮತ್ತು ದಮ್ಮು, ಕೆಮ್ಮಿನಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಗೆ ದಾಖಲಾದಾಗ ಪರಿಸ್ಥಿತಿ ಕೈಮೀರಿತ್ತು. ಆಗ ಆಸ್ಪತ್ರೆಯ ವೈದ್ಯರುಗಳು ಆಕೆಯ ಕುಟುಂಬದವರಿಗೆ ವೃದ್ಧೆಯ ಆರೋಗ್ಯ ಸ್ಥಿತಿಯ ಬಗ್ಗೆ ಕೂಲಂಕಶವಾಗಿ ವಿವರಿಸಿ, ಜಿಲ್ಲಾ ಕೇಂದ್ರಕ್ಕೆ ಸೇರಿಸುವಂತೆ ತಿಳಿಸಿದರು. ಆದರೆ, ರೈತಾಪಿ ವರ್ಗದ ಕುಟುಂಬದವರು ಏನಾದರಾಗಲಿ ಇಲ್ಲೇ ಚಿಕಿತ್ಸೆ ನೀಡುವಂತೆ ಕೇಳಿಕೊಂಡಾಗ ವೈದ್ಯರ ತಂಡ ಚಿಕಿತ್ಸೆ ಮುಂದುವರೆಸಿ ಈಗ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಡಾ. ಭಾಗರೆಡ್ಡಿ ಮಾತನಾಡಿ, ಇಲ್ಲಿರುವ ಸೌಲಭ್ಯಗಳನ್ನು ಬಳಸಿ ಅಜ್ಜಿಯ ಕ್ಲಿಷ್ಟಕರ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಶ್ರಮಿಸಿದ ಎಲ್ಲ ಸಿಬ್ಬಂದಿ ಕಾರ್ಯವೈಖರಿಗೆ ಹರ್ಷ ವ್ಯಕ್ತಪಡಿಸಿದರು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಕಾಳಜಿಯಿಂದ ಕೊರೊನಾ ಗೆದ್ದು ಬಂದ ಅಜ್ಜಿ ಕುಟುಂಬದವರಲ್ಲಿ ಧನ್ಯತಾ ಭಾವ ಆವರಿಸಿತ್ತು. ಡಾ. ಶಿವಪ್ರಸಾದ ಮೈತ್ರಿ, ಡಾ. ಭಾಗರೆಡ್ಡಿ, ಡಾ.ಪ್ರಿಯಾಂಕಾ, ಡಾ. ಜಯಶ್ರೀ, ಮೌನೇಶ್, ಹೇಮಸಿಂಗ್, ರಾಜೇಶ್ವರಿ, ದೇವಿಂದ್ರಮ್ಮ, ಭೀಮಾಶಂಕರ ಹರೀಶ್, ಅನುಶಾ ಅವರು ಅಜ್ಜಿಯನ್ನು ಮನೆಗೆ ಬೀಳ್ಕೊಟ್ಟರು.
ಓದಿ: 'ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇದ್ದೇ ಇರುತ್ತದೆ, ಅದಕ್ಕೆ ಕಾಲ ಕೂಡಿ ಬರಬೇಕು'