ಯಾದಗಿರಿ: ಕಲುಷಿತ ನೀರು ಸೇವಿಸಿ 22 ಮಕ್ಕಳು, ಇಬ್ಬರು ವಯಸ್ಕರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ. ಅಸ್ವಸ್ಥರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಗ್ರಾಮಸ್ಥರಾದ ಯಲ್ಲಪ್ಪ ಛಲುವಾದಿ ಮಾತನಾಡಿ, "ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ಕೈ ಪಂಪ್ (ಕೊಳವೆಬಾವಿ) ನೀರನ್ನು ಬಿಸಿಯೂಟ ಸೇವಿಸಿದ ಬಳಿಕ ಮಕ್ಕಳು ತಟ್ಟೆ ತೊಳೆಯಲು ಮತ್ತು ಕುಡಿಯಲು ಬಳಸಿದ್ದಾರೆ. ಇದರಿಂದಾಗಿ ಅಸ್ವಸ್ಥಗೊಂಡಿರುವ ಅನುಮಾನವಿದೆ" ಎಂದು ಶಂಕೆ ವ್ಯಕ್ತಪಡಿಸಿದರು.
"ನಾಲ್ವರು ಮಕ್ಕಳಿಗೆ ಗ್ಲುಕೋಸ್ ಹಾಕಲಾಗಿದೆ. 18 ಮಕ್ಕಳಿಗೆ ಔಷಧ ನೀಡಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ವಯಸ್ಕರಿಗೆ ಗ್ಲುಕೋಸ್ ಹಾಕಿ ಚಿಕಿತ್ಸೆ ನಡೆದಿದೆ. ಚಿಕ್ಕಿನಹಳ್ಳಿ ಗ್ರಾಮದಲ್ಲಿ 400 ಮನೆಗಳಿಂದ 2,000 ಜನರಿದ್ದಾರೆ. ಆಶಾ ಕಾರ್ಯಕರ್ತರು ಎಲ್ಲ ಮನೆಗಳಿಗೆ ಭೇಟಿ ನೀಡಿ ನೀರು ಕುದಿಸಿ, ಆರಿಸಿ ಸೇವಿಸಬೇಕು ಎಂದು ಜಾಗೃತಿ ಮೂಡಿಸಿದ್ದಾರೆ" ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ: ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣ: ಮೂವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ
ಹಿಂದಿನ ಘಟನೆಗಳು..: ಇತ್ತೀಚಿಗೆ, ಕಲುಷಿತ ನೀರು ಸೇವನೆಯಿಂದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಸಂಭವಿಸಿತ್ತು. ಜನರು ವಾಂತಿ ಮತ್ತು ಭೇದಿಯಿಂದ ಬಳಲಿದ್ದರು. ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲಿಂಗಸುಗೂರು ಟಿಎಚ್ಒ ಡಾ.ಅಮರೇಶ ಮಂಕಾಪುರ ಪ್ರತಿಕ್ರಿಯಿಸಿ, "ಈ ಗ್ರಾಮದಲ್ಲಿ ಸರಿಸುಮಾರು 3 ಸಾವಿರ ಜನರು ವಾಸವಿದ್ದಾರೆ. ಕಳೆದ ತಿಂಗಳ 31ನೇ ತಾರೀಖಿನಂದು ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಿಂದ ಅಸ್ವಸ್ಥಗೊಂಡವರನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿತ್ತು. ಇದಾದ ನಂತರ ಈ ತಿಂಗಳ 4ನೇ ತಾರೀಖಿನಂದು ಕೆಲವರು ವಾಂತಿ ಮತ್ತು ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ 6ನೇ ತಾರೀಖಿನಿಂದ ನಿರಂತರವಾಗಿ ಪ್ರಕರಣ ಹೆಚ್ಚಾಗಿದೆ. ಈವರೆಗೆ ಸುಮಾರು 60 ಕ್ಕೂ ಹೆಚ್ಚು ಜನರು ಕಲುಷಿತ ನೀರು ಸೇವಿಸಿ ವಾಂತಿ ಮತ್ತು ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರಿಗೆ ಗ್ರಾಮದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾಗ್ರತಾ ಕ್ರಮದ ಜೊತೆಗೆ ಅಗತ್ಯ ಕ್ರಮವನ್ನು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದರು.