ಯಾದಗಿರಿ: ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹಕ್ಕೆ ಯಾದಗಿರಿ ಜಿಲ್ಲೆಯ ಜನ ಅಕ್ಷರಶಃ ನಲುಗಿ ಹೋಗಿದ್ದಾರೆ. ಬರದ ನಾಡಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಬರಸಿಡಿಲು ಬಡಿದರೆ, ಸಾವಿರಾರು ಜನ ಸೂರು ಕಳೆದುಕೊಂಡು ಬೀದಿಗೆ ಬೀಳುವಂತೆ ಮಾಡಿದೆ.
ಆಗಸ್ಟ್ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮುಂಗಾರು ಬೆಳೆ ನಷ್ಟದಲ್ಲಿದ್ದ ಜಿಲ್ಲೆಯ ಅನ್ನದಾತರಿಗೆ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮೇಘರಾಜ ಮತ್ತು ಭೀಮೆಯ ನೆರೆ ಹಾವಳಿ ಆಘಾತಗೊಳಿಸಿದೆ. ಸಾಲಸೂಲ ಮಾಡಿ ರೈತನು ಬೆಳೆದ ಭತ್ತ, ಹತ್ತಿ, ತೊಗರಿ ಸೇರಿದಂತೆ ವಿವಿಧ ಬೇಳೆ ನೀರು ಪಾಲಾಗುವ ಮೂಲಕ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸುವಂತಾದರೆ, ಅನೇಕರು ಮನೆ ಮಠ ಕಳೆದುಕೊಳ್ಳುವಂತೆ ಮಾಡಿದೆ. ಅತಿವೃಷ್ಟಿ ಹಾಗೂ ಪ್ರವಾಹದಿಂದ ಆದ ಹಾನಿ ಕುರಿತು ಜಿಲ್ಲಾಡಳಿತ ಜಂಟಿ ಸಮೀಕ್ಷೆ ನಡೆಸಿ ಹಾನಿಯಾದ ಅಂದಾಜು ಪಟ್ಟಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಜಿಲ್ಲಾಡಳಿತ ಸರ್ಕಾರಕ್ಕೆ ನೀಡಿದ ಒಟ್ಟು ಹಾನಿಯಾದ ಅಂದಾಜಿನ ಪಟ್ಟಿ ಈ ಕೆಳಗಿನಂತಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಮಳೆಯಿಂದ ಆದ ಬೆಳೆ ಹಾನಿ- 24 ಸಾವಿರ ಹೆಕ್ಟೇರ್ ಪ್ರದೇಶ, ಇದರ ಅಂದಾಜು ಮೊತ್ತ 46 ಕೋಟಿ ರೂ. ಅಕ್ಟೋಬರ್ ತಿಂಗಳಲ್ಲಿ ಮಳೆಯಿಂದ ಆದ ಬೆಳೆ ಹಾನಿ 12ಸಾವಿರದ 76 ಹೆಕ್ಟೇರ್ ಪ್ರದೇಶ, ಇದರ ಮೊತ್ತ 33 ಕೋಟಿ ರೂ. ಅಕ್ಟೋಬರ್ ತಿಂಗಳಲ್ಲಾದ ಭೀಮಾ ಪ್ರವಾಹದಿಂದ ಆದ ಬೆಳೆ ಹಾನಿ 17 ಸಾವಿರ ಹೆಕ್ಟೇರ್ ಪ್ರದೇಶ ಇದರ ಅಂದಾಜು ಮೊತ್ತ 24 ಕೋಟಿ ರೂ. ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 53 ಸಾವಿರ 76 ಹೆಕ್ಟೇರ್ ಜಮೀನಿನಲ್ಲಿ ರೈತರು ಬೆಳೆದ ಬೆಳೆ ಹಾಳಗಿದ್ದು ಒಟ್ಟು 107 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ.
ಕಳೆದ ಮೂರು ತಿಂಗಳಿನಿಂದ ಸುರಿದ ಧಾರಾಕಾರ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ 3,398 ಮನೆಗಳು ನೆಲಕ್ಕುರಳುವ ಮೂಲಕ ಸಾವಿರಾರು ಜನರ ಬದುಕು ಬೀದಿಗೆ ಬೀಳುವಂತಾಗಿದೆ. ಸನ್ನತಿ ಬ್ಯಾರೇಜ್ ನಿಂದ ಭೀಮಾ ನದಿಗೆ 4 ಲಕ್ಷ ಕ್ಯೂಸೆಕ್ ನಷ್ಟು ಭಾರಿ ಪ್ರಮಾಣದಲ್ಲಿ ಬಿಡಲಾದ ನೀರಿನಿಂದ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆದಾಗ ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು.
ಜಿಲ್ಲೆಯ ಎರಡು ಪ್ರಮುಖ ನದಿಗಳಾದ ಕೃಷ್ಣಾ ಮತ್ತು ಭೀಮಾ ನದಿ ತೀರಗಳಲ್ಲಿ ಆಗುತ್ತಿರುವ ಪ್ರವಾಹ ನಿರ್ವಹಣೆ ಕಾರ್ಯದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಈ ಎರಡು ನದಿಗಳ ತೀರದಲ್ಲಿ ಆಗುತ್ತಿರುವ ನೆರೆ ಹಾವಳಿಯ ಶಾಶ್ವತ ಪರಿಹಾರ ಕಾರ್ಯ ಮಾಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿವೆ. ಅದಲ್ಲದೇ ಅತಿವೃಷ್ಟಿ ಹಾಗೂ ಪ್ರವಾಹದಿಂದ ಆದ ಹಾನಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿ ಆಗಿದೆ, ಜಿಲ್ಲಾಡಳಿತ ತರಾತುರಿಯಲ್ಲಿ ಬೆಳೆ ಸಮೀಕ್ಷೆ ನಡಿಸಿ ಸರ್ಕಾರಕ್ಕೆ ವರದಿ ನೀಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡೆಸಿದ್ದಾರೆ.
ಒಟ್ಟಾರೆಯಾಗಿ ಮಳೆ ಮತ್ತು ನೆರೆ ಹಾವಳಿಯಿಂದ ಯಾದಗಿರಿ ಜಿಲ್ಲೆಯ ಅನ್ನದಾತ ಕಣ್ಣೀರಲ್ಲಿ ಕೈ ತೊಳೆಯುವಂತಾದರೆ, ಸಾವಿರಾರು ಜನ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ಬರುವ ಮೂಲಕ ಇವರಿಗೆ ಸೂಕ್ತ ಪರಿಹಾರ ನೀಡಲು ಮುಂದಾಗಬೇಕಿದೆ.