ವಿಜಯಪುರ: ಹದಗೆಟ್ಟ ರಸ್ತೆಯ ಗುಂಡಿಗಳಿಗೆ ಜೆಸಿಬಿಯಿಂದ ಗರಸು ಹಾಕುವ ಮೂಲಕ ಯುವಕರು ಹದಗೆಟ್ಟ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
ನಗರದ ಬಡೆ ಕಮಾನ್ ರಸ್ತೆ, ದರ್ಬಾರ್ ಹೈಸ್ಕೂಲ್ ಹಿಂಭಾಗದ ದರ್ಗಾ ರಸ್ತೆ ಸೇರಿದಂತೆ ಗುಮ್ಮಟ ನಗರಿಯ ಹಲವು ಭಾಗಗಳಲ್ಲಿ ಯುವಕರು ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕಳೆದ ಹಲವು ತಿಂಗಳಿಂದ ನಗರದ ಹಲವು ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಪಾದಚಾರಿಗಳು ವಾಹನ ಸವಾರರು ರಸ್ತೆಗೆ ಬರಲು ಹೆದರುವಂತಾಗಿದೆ.
ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ರಸ್ತೆಯಲ್ಲಿರುವ ಗುಂಡಿಗಳಿಗೆ ನೀರು ತುಂಬಿಕೊಳ್ಳುತ್ತಿರುವ ಹಿನ್ನೆಲೆ ವಾಹನ ಸವಾರರು ರಸ್ತೆ ದಾಟಲು ಹಿಂದು- ಮುಂದು ನೋಡವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಲವು ಬಾರಿ ನಗರ ನಿವಾಸಿಗಳು ರಸ್ತೆ ಸರಿ ಮಾಡುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಯುವಕರೇ ಹೆಚ್ಚು ಗುಂಡಿಗಳು ಇರುವ ರಸ್ತೆಗೆ ಗರಸು ಹಾಕುತ್ತಿದ್ದಾರೆ.
ಎಎಚ್‌ಬಿ ಸೋಷಿಯಲ್ ಗ್ರೂಪ್‌ನ ಯುವಕರು ಸೇರಿಕೊಂಡು ಜನಸಂಚಾರ ಹೆಚ್ಚಾಗಿರುವ ರಸ್ತೆಗಳಿಗೆ ಟ್ರ್ಯಾಕ್ಟರ್ ಮೂಲಕ ಗರಸು ತಂದು ಜೆಸಿಬಿ ಮೂಲಕ ಗುಂಡಿ ಮುಚ್ಚಿಸಿ ಸಾರ್ವಜನಿಕ ಓಡಾಟಕ್ಕೆ ಅನವು ಮಾಡಿಕೊಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದ್ದು. ಬೇಗ ರಸ್ತೆ ಸುಧಾರಣೆ ಮಾಡುವಂತೆ ಪಾಲಿಕೆ ನಗರ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.