ವಿಜಯಪುರ: ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ನೀಡಲು ಹೋಗಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬಸವನಬಾಗೇವಾಡಿಯ ಹೂವಿನ ಹಿಪ್ಪರಗಿಯಲ್ಲಿ ನಡೆದಿದೆ.
ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಗಣಿತ ವಿಷಯದ ಪರೀಕ್ಷೆ ನಡೆಯುತ್ತಿತ್ತು. ಈ ವೇಳೆ ಗ್ರಾಮದ 19 ವರ್ಷದ ಸಾಗರ ಚಲವಾದಿ ಎಂಬಾತ ಪರೀಕ್ಷೆಯಲ್ಲಿ ತನ್ನ ಸ್ನೇಹಿತನಿಗೆ ಕಾಪಿ ಚೀಟಿ ಕೊಡಲು ಹೋದಾಗ ಬೆನ್ನಟ್ಟಿರುವ ಪೊಲೀಸರು ಲಾಠಿ ಏಟು ನೀಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದಾಗ ಯುವಕ ಮೃತಪಟ್ಟಿದ್ದಾನೆ. ಪೊಲೀಸರ ಲಾಠಿ ಏಟಿನಿಂದ ಯುವಕ ಮೃತಪಟ್ಟನೇ? ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟನೇ? ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ.
ಈ ಯುವಕನಿಗೆ ಹೃದಯ ಸಂಬಂಧಿ ಕಾಯಿಲೆಯಿತ್ತು ಎನ್ನಲಾಗುತ್ತಿದೆ. ಕಾಪಿ ಚೀಟಿ ಕೊಡಲು ಬಂದಿದ್ದ ವೇಳೆ ಪೊಲೀಸರು ಬೆನ್ನತ್ತಿದ್ದು, ಇದರಿಂದ ಗಾಬರಿಯಾದ ಯುವಕನಿಗೆ ಹೃದಯಾಘಾತವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಈಗ ಮರಣೋತ್ತರ ಪರೀಕ್ಷಾ ವರದಿಯಿಂದ ಘಟನೆಯ ಸತ್ಯಾಂಶ ಹೊರಬರಬೇಕಿದೆ.
ಈಟಿವಿ ಭಾರತ ಜತೆ ಮಾತನಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್, ಮೃತ ಯುವಕನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು ಎಂಬುದು ತಿಳಿದು ಬಂದಿದೆ. ಕಾಪಿ ಕೊಡಲು ಹೋದಾಗ ಪೊಲೀಸರು ಬೆನ್ನಟ್ಟಿರುವುದು ನಿಜ. ಈ ವೇಳೆ ಆತ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇದರಲ್ಲಿ ಯಾರು ತಪ್ಪಿತಸ್ಥರು ಎನ್ನುವುದನ್ನು ತಿಳಿಯಲು ತನಿಖೆ ನಡೆಸುವುದಾಗಿ ತಿಳಿಸಿದರು.