ವಿಜಯಪುರ: ಪರೀಕ್ಷಾ ಕೇಂದ್ರಕ್ಕೆ ಕಾಪಿ ಚೀಟಿ ನೀಡಲು ಹೋಗಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬಸವನಬಾಗೇವಾಡಿಯ ಹೂವಿನ ಹಿಪ್ಪರಗಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.
ಯುವಕ ಪೊಲೀಸರ ಲಾಠಿ ಏಟಿನಿಂದ ಇಲ್ಲವೇ ಹೃದಯ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಅನುಮಾನ ವ್ಯಕ್ತವಾಗಿತ್ತು. ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಯುವಕ ಬೈಕ್ ನಿಂದ ಬಿದ್ದು ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಪ್ರಕಟಣೆ ಹೊರಡಿಸಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.

ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ಗಣಿತ ವಿಷಯದ ಪರೀಕ್ಷೆ ನಡೆಯುತ್ತಿತ್ತು. ಆ ವೇಳೆ ಗ್ರಾಮದ 19 ವರ್ಷದ ಸಾಗರ ಚಲವಾದಿ ಎಂಬಾತ ಪರೀಕ್ಷೆಯಲ್ಲಿ ತನ್ನ ಸ್ನೇಹಿತನಿಗೆ ಕಾಪಿ ಚೀಟಿ ಕೊಡಲು ಹೋದಾಗ ಬೆನ್ನಟ್ಟಿರುವ ಪೊಲೀಸರು ಲಾಠಿ ಏಟು ನೀಡಿದ್ದಾರೆ ಎಂದು ಮೃತನ ಕುಟುಂಬ ಆರೋಪಿಸಿತ್ತು.
ಓದಿ:ಕಾಪಿ ಚೀಟಿ ಕೊಡಲು ಹೋದಾಗ ಬೆನ್ನಟ್ಟಿದ ಪೊಲೀಸರು; ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ
ಮೊದಲು ಸಾಗರ ಮೃತಪಟ್ಟಿರುವುದು ಪೊಲೀಸ್ ಲಾಠಿ ಏಟಿನಿಂದ ಎಂದು ಅನುಮಾನಿಸಲಾಗಿತ್ತು. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಅವರ ಪ್ರಕಾರ ಮೃತ ಸಾಗರ ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದನು ಎಂದು ಹೇಳಿಕೆ ನೀಡಿದ್ದರು. ಮೃತ ಸಾಗರ ಸಾವಿನ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದರು.
ಆದರೆ, ಪೊಲೀಸ್ ಇಲಾಖೆ ರಾತ್ರಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ಹೊಲಕ್ಕೆ ಗೊಬ್ಬರ ತರಲು ಸಾಗರ ಹಾಗೂ ಆತನ ಜತೆ ಬಸಪ್ಪ ಚಲವಾದಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದು ಹಿಂದುಗಡೆ ಕುಳಿತಿದ್ದ ಸಾಗರನಿಗೆ ಪೆಟ್ಟಾಗಿತ್ತು. ಕೆಲ ಸ್ನೇಹಿತರು ಆಸ್ಪತ್ರೆಗೆ ಸಾಗಿಸುವಾಗ ಆತ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಮೃತ ಸಾಗರನ ತಂದೆ ಶಿವಪ್ಪ ಚಲವಾದಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಕೂಡ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈಗ ಇಡೀ ಪ್ರಕರಣದ ಸ್ವರೂಪವೇ ಬದಲಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.