ಬೆಂಗಳೂರು: ಮತ್ತೆ ಸಿಎಂ ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ಶಾಸಕ ಬಸನಗೌಡ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಫೇಸ್ ಬುಕ್ ಮೂಲಕ ಹರಿಹಾಯ್ದಿರುವ ಅವರು, ಮಾ. 25ರಂದು ಸುಮಾರು 25 ಶಾಸಕರ ಹಾಗೂ ಸಚಿವರ ಸಭೆ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆಯಿತು. ಇದರ ಉದ್ದೇಶ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಆಗದೆ ಇರುವುದು. ಸಮಾನವಾಗಿ ಅನುದಾನ ಹಂಚಿಕೆ ಮಾಡದೆ ಇರುವುದು ಮತ್ತು ಸಚಿವರು ಶಾಸಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಾಗಿದೆ. ಅದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರ ಗಮನಕ್ಕೆ ತರದೆ ಯಡಿಯೂರಪ್ಪನವರು ನೇರವಾಗಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸುಮಾರು 1,000 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅದರಲ್ಲೂ ಭಾರತೀಯ ಜನತಾ ಪಕ್ಷದ ಎಲ್ಲಾ ಗ್ರಾಮೀಣ ಪ್ರದೇಶದ ಶಾಸಕರಿಗೆ ಸರಿ ಸಮಾನವಾಗಿ ಅಭಿವೃದ್ಧಿ ಹಣವನ್ನು ನೀಡದೆ ಇರುವ ಬಗ್ಗೆ ಸಿಎಂ ಯಡಿಯೂರಪ್ಪನವರ ಬಗ್ಗೆ ಶಾಸಕರಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಮೇಲಿನ ಕಾರಣಕ್ಕೆ ಸಭೆ ನಡೆದಿದ್ದು, ಸುಮಾರು 65 ಶಾಸಕರು ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹಿ ಸಂಗ್ರಹ ಅಭಿಯಾನ ಮಾಡಿದ್ದಾರೆ ಎಂಬುದು ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು. ಅನೇಕ ಶಾಸಕರುಗಳಿಗೆ ವಿಚಾರಿಸಿದಾಗ ಒಬ್ಬರೂ ಸಹ ಸಹಿ ಮಾಡಿಲ್ಲ ಎಂದು ತಿಳಿಸಿದರು. ಒಂದು ವೇಳೆ ಅಭಿವೃದ್ಧಿ ಹಣ ಬಿಡುಗಡೆ ಮತ್ತು ಶಾಸಕರ ಕ್ಷೇತ್ರಗಳಿಗೆ ಅನುದಾನ ಪತ್ರದಲ್ಲಿ ನನ್ನ ಬಗ್ಗೆ ಉಲ್ಲೇಖ ಮಾಡಿದ್ದರೆ ಶಾಸಕರ ಗಮನಕ್ಕೆ ತರದೆ ತಿರುಚಿದ್ದರೆ ಅದು ಮೋಸ ಮಾಡಿದಂತೆ ಎಂದು ವಿವರಿಸಿದ್ದಾರೆ.
ಯಡಿಯೂರಪ್ಪ ತಮ್ಮ ಹತ್ತಿರದ ಸಂಬಂಧಿ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿಗೆ 82 ಕೋಟಿ ಹಣವನ್ನು ನೇರವಾಗಿ ಬಿಡುಗಡೆ ಮಾಡಿದ್ದು, ಅಲ್ಲದೆ ತುಂಡು ಗುತ್ತಿಗೆ ನೀಡಲು ತೀವ್ರ ಒತ್ತಡ ಹೇರುತ್ತಿದ್ದಾರೆ. ಆದರೆ ಶಾಸಕರಿಗೆ ಸಮಾನವಾಗಿ ಅನುದಾನ ನೀಡಿಲ್ಲ. ಉದಾಹರಣೆಗೆ ಒಬ್ಬ ಬಿಜೆಪಿ ಶಾಸಕರಿಗೆ ಒಂದು ಕೋಟಿ ರೂ., ಇನ್ನೊಬ್ಬ ಬಿಜೆಪಿ ಶಾಸಕರಿಗೆ 25 ಕೋಟಿ ರೂ., 120 ಬಿಜೆಪಿ ಶಾಸಕರಲ್ಲಿ ಕೇವಲ 40 ಶಾಸಕರಿಗೆ ಮಾತ್ರ ಅನುದಾನ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೆಲವು ಸುದ್ದಿಮಾಧ್ಯಮಗಳಲ್ಲಿ ಯತ್ನಾಳ ವಿರುದ್ಧ ಶಾಸಕರ ಆಕ್ರೋಶ ಎಂದು ಕಪೋಲಕಲ್ಪಿತ ಸುದ್ದಿ ಮಾಡಿಸಿದ ಯುವ ರಾಜ್ ಮತ್ತು ಕಂಪನಿ ತಮ್ಮ ವ್ಯಾಪಕ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದಿಂದ ಪಕ್ಷ ಹಾಗೂ ಶಾಸಕರು ಸಂಪೂರ್ಣ ಬೇಸತ್ತು ಹೋಗಿದ್ದಾರೆ. ಅಲ್ಲದೆ ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ಹೊಗಳು ಭಟ್ಟರು ದಲ್ಲಾಳಿಗಳು ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪನವರು ಇತ್ತೀಚಿನ ದಿನಗಳಲ್ಲಿ ತಮ್ಮ ಕುಹಕತನ ಮತ್ತು ಯುವರಾಜನ ಅಧಿಕಾರದ ಹಣದಾಹಕ್ಕಾಗಿ ತಮ್ಮ ಅತ್ಯಂತ ಆತ್ಮೀಯ ಕು. ಶೋಭಾ ಕರಂದ್ಲಾಜೆ, ರಮೇಶ್ ಜಾರಕಿಹೊಳಿ, ಈಶ್ವರಪ್ಪನವರು, ಪ್ರಾಮಾಣಿಕ ಪತ್ರಕರ್ತರುಗಳಾದ ಎಂ.ಬಿ.ಮರಮ್ಕಲ್ ಹಾಗೂ ಮಹಾದೇವ ಪ್ರಕಾಶ್ ಮತ್ತು ಅನೇಕ ಪ್ರಾಮಾಣಿಕ ದಕ್ಷ ಅಧಿಕಾರಿಗಳು ಬಲಿಪಶುಗಳಾಗಿದ್ದಾರೆ. ಅವರ ಅಧಿಕಾರ ದಾಹ ಕುಟುಂಬದ ಹಣದಾಹ ಅತ್ಯಂತ ಅಸಹ್ಯ. ಸಾರ್ವಜನಿಕ ಸಭೆಗಳಲ್ಲಿ ಮತ್ತು ಗೃಹ ಕಚೇರಿಗಳಿಗೆ ಬರುವ ಮಹಿಳೆಯರ ಜೊತೆ ಅವರ ವರ್ತನೆ ಅವರ ವ್ಯಕ್ತಿತ್ವಕ್ಕೆ ಮತ್ತು ವಯಸ್ಸಿಗೆ ಅತ್ಯಂತ ಅವಮಾನ ಎಂದು ಕಿಡಿ ಕಾರಿದ್ದಾರೆ.
ಕಳೆದ ವರ್ಷದ ಅವಧಿಯಲ್ಲಿ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಶಾಸಕರ ಭಾವನೆ ಮತ್ತು ಅವರ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇಲ್ಲದೆ ಇರುವುದು ಶಾಸಕರಲ್ಲಿ ತೀವ್ರ ಅಸಮಾಧಾನ ಇದೆ. ಶಾಸಕಾಂಗ ಸಭೆ ಕರೆದರೆ ಭಿನ್ನಮತ ಸ್ಫೋಟ ಆಗುವ ಭಯದಿಂದ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಈ ಅಧಿವೇಶನ ಮುಕ್ತಾಯಗೊಳಿಸಿದ್ದು ದುರದೃಷ್ಟಕರ. ಅಚ್ಚರಿ ಏನೆಂದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕಾಂಗ ಸಭೆ ಕರೆಯಲು ಒಬ್ಬ ಶಾಸಕರು ನನ್ನನ್ನು ಏಕವಚನದಲ್ಲಿ ನಿಂದಿಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು. ಆದರೆ ಆ ಸಭೆ ಕರೆಯುವ ಧೈರ್ಯ ಯಡಿಯೂರಪ್ಪನವರು ಮಾಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಶಕ್ತಿ ಪ್ರದರ್ಶನಕ್ಕಷ್ಟೇ ಈ ಸಭೆ
ತಮ್ಮ ಶಕ್ತಿ ಪ್ರದರ್ಶನ ಮಾಡಲಿಕ್ಕೆ ಕೇಂದ್ರಿಯ ಪಕ್ಷ ಅಂಜಿಸಲಿಕ್ಕೆ ತಮ್ಮ ಜೊತೆ 65 ಶಾಸಕರು ಇದ್ದಾರೆ ಎಂದು ತೋರಿಸಲು ಈ ಸಭೆ ಕರೆದರೇ ಹೊರತು ಶಾಸಕರ ಸಮಸ್ಯೆಗಳನ್ನು ಪರಿಹರಿಸಲು ಅಲ್ಲ. ಇಂತಹ ಎಷ್ಟೋ ಸಭೆಗಳು ಕರೆದಿದ್ದಾರೆ. ಅದರ ಫಲಶ್ರುತಿ ಶೂನ್ಯ.
ನಮ್ಮ ಪಕ್ಷದ ಮೂಲ ಸಿದ್ಧಾಂತ ರಾಷ್ಟ್ರೀಯತೆ, ಹಿಂದುತ್ವ. ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿರುವ ಪಕ್ಷ. ನಮ್ಮ ರಾಷ್ಟೀಯ ಉನ್ನತ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮತ್ತು ನಮ್ಮ ಹೆಮ್ಮೆಯ ವಿಶ್ವ ನಾಯಕರಾದ ಕಳಂಕ ರಹಿತ ಪ್ರಧಾನಿ ನರೇಂದ್ರ ಮೋದಿಜೀ ಅವರು ನಮ್ಮ ಆದರ್ಶ. ಇವರೆಲ್ಲ ಭ್ರಷ್ಟಾಚಾರ ಕುಟುಂಬ ರಾಜಕಾರಣ ಮಾಡಲೇ ಇಲ್ಲ. ಅವರೆಲ್ಲರ ಕನಸುಗಳಿಗೆ ಕಳಂಕ ತರುವ ಕೆಲಸ ಯಡಿಯೂರಪ್ಪನವರು ಮತ್ತು ಅವರ ಕುಟುಂಬ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇಂದು ವಿಶ್ವದ ನಮ್ಮ ಹೆಮ್ಮೆಯ ನಾಯಕ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರು ಆದರ್ಶ. ನನಗೆ ಸಂಪೂರ್ಣ ವಿಶ್ವಾಸವಿದೆ ನಾನು ಎತ್ತಿದ ಪ್ರಶ್ನೆಗಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ನಾನು ತೆಗೆದುಕೊಂಡ ಹೋರಾಟ ಯಶಸ್ವಿಯಾಗುತ್ತದೆ ಎಂದು ವಿವರಿಸಿದ್ದಾರೆ.