ವಿಜಯಪುರ: ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಿರಸ ಅಭಿವೃದ್ಧಿ ಮಂಡಳಿಯು, ದ್ರಾಕ್ಷಿ ಬೆಳೆಯ ಸಂಗ್ರಹ ಹಾಗೂ ಸಂಸ್ಕರಣೆಗಾಗಿ ಅತ್ಯಾಧುನಿಕ ಶೈತ್ಯ ಸಂಗ್ರಹ ನಿರ್ಮಿಸಲು ನಿಗದಿಪಡಿಸಿರುವ ಸ್ಥಳವನ್ನು ಭಾನುವಾರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ದ್ರಾಕ್ಷಿ ಕಣಜವೆಂದು ಕರೆಯುವ ವಿಜಯಪುರದ ಹೊರವಲಯದ ತೊರವಿ ತಾಂಡಾದಲ್ಲಿ 141ಎಕರೆ ಜಾಗವನ್ನು ಮೀಸಲಿಡಲಾಗಿದೆ. ನಗರದ ಹೊರವಲಯದಲ್ಲಿ ಇಷ್ಟು ದೊಡ್ಡ ಜಾಗವನ್ನು ಬೇರೆಯವರ ಪಾಲಿಗೆ ಹೋಗದಂತೆ ನೋಡಿಕೊಂಡು, ಮುಂದಿನ ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಸಂಕಲ್ಪ ಹೊಂದಿರುವ ದ್ರಾಕ್ಷಿ ನಿಗಮ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು.
ಕಾಮಗಾರಿ ಸ್ಥಳವನ್ನು ವೀಕ್ಷಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತಕ ಬಜೆಟ್ನಲ್ಲಿ ದ್ರಾಕ್ಷಿ ನಿಗಮ ಮಂಡಳಿಗೆ 35 ಕೋಟಿ ರೂ. ಹಣವನ್ನು ಸಿಎಂ ಬೊಮ್ಮಾಯಿ ಮೀಸಲಿಟ್ಟಿದ್ದಾರೆ. ಅದರ ಸದುಪಯೋಗವಾಗಬೇಕು. ಪೂರ್ಣ ಕಾಮಗಾರಿ ಮುಗಿಸಿ ಆನ್ಲೈನ್ ಮೂಲಕ ಒಣದ್ರಾಕ್ಷಿ ಹಾಗೂ ವೈನ್ ತಯಾರಿಸಲು ಇನ್ನೂ 100 ಕೋಟಿ ಅವಶ್ಯಕತೆ ಇದ್ದು, ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಬೇಕು. ಬಳಿಕ ಸಿಎಂ ಬೊಮ್ಮಾಯಿ ಅವರಿಂದ ಅದಕ್ಕೆ ಅನುಮೋದನೆ ದೊರೆಯುವಂತೆ ಮಾಡುವುದಾಗಿ ಶಾಸಕ ಯತ್ನಾಳ್ ಭರವಸೆ ನೀಡಿದರು.
ಸದ್ಯ ಇರುವ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ, ಕೇವಲ ರಾಜಕೀಯ ಮಾಡುವುದರಲ್ಲಿ ನಿರತರಾಗಿದ್ದಾರೆ. ತಾವು ಹಾಗೆ ಮಾಡಲ್ಲ, ಇನ್ನೆರಡು ತಿಂಗಳಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಕರೆಯಿಸಿ ಅವರಿಂದ ದ್ರಾಕ್ಷಿ ಸಂಸ್ಕರಣಾ ಘಟಕ ಹಾಗೂ ವೈನ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ಕೆಲಸ ಮಾಡಲಾಗುವುದು ಎಂದರು.
ಇದನ್ನೂ ಓದಿ: ಬಿಜೆಪಿ ಮತ್ತೆ ಆಡಳಿತಕ್ಕೆ ಬಂದ್ರೆ ಮಹಿಳೆಯರಿಗೆ ಉಚಿತ ಪಾಸ್: ಸಚಿವ ಶ್ರೀರಾಮುಲು
ಇದೇ ವೇಳೆ ಮಾತನಾಡಿದ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ, 2007ರಲ್ಲಿ ದ್ರಾಕ್ಷಿ ಶೈತ್ಯಾಗಾರ ಹಾಗೂ ವೈನ್ ಪಾರ್ಕ್ ನಿರ್ಮಾಣಕ್ಕೆ ವಿಜಯಪುರದಲ್ಲಿ ಬಹುದೊಡ್ಡ ಜಾಗ ಸಿಕ್ಕಿತ್ತು. ಆದರೆ ಇಲ್ಲಿಯವರೆಗೆ ಈ ಜಾಗ ಉಳಿಸಿಕೊಳ್ಳಲು ಶ್ರಮ ವಹಿಸಲಾಗಿದೆ. ಸರ್ಕಾರ ಮೊದಲು ಇಲ್ಲಿಯವರೆಗೆ 32 ಕೋಟಿ ಮಾತ್ರ ನೀಡಿತ್ತು. ಆದರೆ ಬೊಮ್ಮಾಯಿ ಬಜೆಟ್ನಲ್ಲಿ ಮತ್ತೆ 35ಕೋಟಿ ರೂ. ಮಂಜೂರಾಗಿದೆ. ನಮ್ಮ ಬೇಡಿಕೆ 400ಕೋಟಿ ಇದೆ. ಸದ್ಯ ಶಾಸಕ ಬಸನಗೌಡ ಪಾಟೀಲ್ ಮತ್ತಷ್ಟು ಹಣ ಮಂಜೂರು ಮಾಡುವುದಾಗಿ ಭರವಸೆ ನೀಡಿದ ಕಾರಣ ಮೂರು ವರ್ಷದ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.