ವಿಜಯಪುರ: ಇಂದು ನಗರದ ಹೊರ ಭಾಗದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಡುವೆ ಮಹತ್ವದ ಸಭೆ ನಡೆದಿದೆ.
ವಿಜಯಪುರ ನಗರದ ಹೊರ ಭಾಗದಲ್ಲಿರುವ ಹೈಪರ್ ಮಾರ್ಟ್ನಲ್ಲಿ ಈ ಸಭೆ ನಡೆದಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲೀಕತ್ವದ ಹೈಪರ್ ಮಾರ್ಟ್ ಇದಾಗಿದೆ. ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಇಂಡಿ ಹಾಗೂ ಸಿಂದಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪಸಭೆಯಲ್ಲಿ ಭಾಗವಹಿಸಿ ನಂತರ ವಿಜಯಪುರಕ್ಕೆ ಆಗಮಿಸಿ ಯತ್ನಾಳ್ ಅವರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದರು.
ಬೆಳಗ್ಗೆಯಿಂದ ಅರುಣ್ ಸಿಂಗ್ ಅವರಿಂದ ಯತ್ನಾಳ್ ಅಂತರ ಕಾಯ್ದುಕೊಂಡಿದ್ದರು. ಸಂಜೆ ಏಕಾಏಕಿ ಇಬ್ಬರು ನಾಯಕರು ಭೇಟಿಯಾಗಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಯತ್ನಾಳ್ ಕೇವಲ ಒಬ್ಬ ಶಾಸಕ ಎಂದು ಅರುಣ್ ಸಿಂಗ್ ಹೇಳಿಕೆ ನೀಡಿದ್ದ ಬೆನ್ನಲ್ಲೆ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಇನ್ನು ಬೆಳಗ್ಗೆ ಬಿಜೆಪಿ ಕಾರ್ಯಕ್ರಮದಲ್ಲಿ ಯತ್ನಾಳ್ ಬಗ್ಗೆ ಪ್ರತಿಕ್ರಿಯೆ ನೀಡಲು ಅರುಣ್ ಸಿಂಗ್ ನಿರಾಕರಿಸಿದ್ದರು. ಇದೀಗ ಏಕಾಏಕಿ ಯತ್ನಾಳ್ ಅವರ ಮಾಲೀಕತ್ವದ ಮಾರ್ಟ್ಗೆ ಭೇಟಿ ನೀಡಿ ಅವರ ಜೊತೆ ಸಭೆ ಮಾಡಿರುವುದು ಕುತೂಹಲ ಮೂಡಿಸಿದೆ. ಇತ್ತೀಚಿಗೆ ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿರುವ ಬಗ್ಗೆ ಇಂಡಿ ಕಾರ್ಯಕ್ರಮದಲ್ಲಿ ಅರುಣ್ ಸಿಂಗ್ ಜಿಲ್ಲಾ ಬಿಜೆಪಿ ಸಾಧನೆ ಬಗ್ಗೆ ಹೊಗಳಿದ್ದರು.
ಇದನ್ನೂ ಓದಿ: ಮಂತ್ರಾಲಯ ಮಠಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ..