ಮುದ್ದೇಬಿಹಾಳ: ಅನೈತಿಕ ಸಂಬಂಧ ಹೊಂದಿದ್ದ ಇಬ್ಬರು ವಿಷ ಸೇವನೆ ಮಾಡಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪುರುಷನ ಸ್ಥಿತಿ ಗಂಭೀರವಾಗಿರುವ ಘಟನೆ ತಾಲೂಕಿನ ಬಿದರಕುಂದಿ ಗ್ರಾಮ ವ್ಯಾಪ್ತಿಯ ಹೊಲವೊಂದರಲ್ಲಿ ಮಂಗಳವಾರ ನಡೆದಿದೆ.
ಮೃತಳನ್ನು ಎರಡು ಮಕ್ಕಳ ತಾಯಿ ಮುದ್ದೇಬಿಹಾಳ ತಾಲೂಕು ಗಂಗೂರ ಗ್ರಾಮದ ರೇಣುಕಾ ಅಶೋಕ್ ಝಳಕಿ (40) ಎಂದು ಗುರುತಿಸಲಾಗಿದೆ. ಆರು ಮಕ್ಕಳ ತಂದೆ ಆಗಿರುವ ತಾಲೂಕಿನ ಹಡಲಗೇರಿ ಗ್ರಾಮದ ಬಸವರಾಜ ಹಣಮಂತ್ರಾಯ ಕಿಲಾರಹಟ್ಟಿ (46) ಸ್ಥಿತಿಯೂ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮೂಲತಃ ಕಾಳಗಿ ಗ್ರಾಮದವಳಾದ ರೇಣುಕಾ ಹಾಗೂ ಹಡಲಗೇರಿ ಗ್ರಾಮದ ಬಸವರಾಜ ಮಧ್ಯೆ ಮೊದಲಿನಿಂದಲೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ರೇಣುಕಾಳ ಪತಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದು, ರೇಣುಕಾ ಆಕೆಯ ಮಕ್ಕಳೊಂದಿಗೆ ಗಂಗೂರ ಗ್ರಾಮದಲ್ಲಿ ವಾಸವಾಗಿದ್ದಳು.
ಮಂಗಳವಾರ ತಮ್ಮ ಸಂಬಂಧಿಕರನ್ನು ಮಾತನಾಡಿಸಿಕೊಂಡು ಬರುವುದಾಗಿ ಪಕ್ಕದ ಮನೆಯ ಅಜ್ಜಿಗೆ ಹೇಳಿ ಅಬ್ಬಿಹಾಳ ಗ್ರಾಮಕ್ಕೆ ಬಂದಿದ್ದಾಳೆ. ಅಲ್ಲಿಂದ ಮುದ್ದೇಬಿಹಾಳದಲ್ಲಿ ತನ್ನ ಪ್ರಿಯಕರ ಬಸವರಾಜನೊಂದಿಗೆ ಬಿದರಕುಂದಿಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ವಿಷದ ಬಾಟಲು ಸಿಕ್ಕಿರುವುದು, ಮೃತಳ ಬಾಯಲ್ಲಿ ನೊರೆಯ ಜೊತೆ ರಕ್ತ ಬಂದಿರುವುದು ಇವರು ವಿಷ ಸೇವಿಸಿದ್ದನ್ನು ಖಚಿತಪಡಿಸಿದೆ. ಅಲ್ಲದೇ ಆಕೆಯ ಮುಖದ ಮೇಲೆ ಗಾಯದ ಗುರುತು ಇದ್ದು ಆಕೆಗೆ ಬಲವಂತವಾಗಿ ವಿಷ ಸೇವನೆ ಮಾಡಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ,ಪಿಎಸೈ ಎಂ.ಬಿ.ಬಿರಾದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಮೃತಳ ಸಹೋದರ ಕಾಳಗಿ ಗ್ರಾಮದ ಲಕ್ಕಪ್ಪ ನಿಗರಿ ಸಹೋದರಿ ರೇಣುಕಾ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದಾರೆ.
ಓದಿ: ಡಾ. ಜಿ.ಪರಮೇಶ್ವರ್ಗೆ ಸಿಎಂ ಸ್ಥಾನ ನೀಡಬೇಕು: ತುಮಕೂರು ಕಾಂಗ್ರೆಸ್ ಮುಖಂಡರ ಒಕ್ಕೊರಲ ಆಗ್ರಹ..!