ವಿಜಯಪುರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುತ್ತಿದ್ದಂತೆ ಜಿಲ್ಲೆಯ ಮೂವರು ಸಚಿವರು ಈಗ ಮಾಜಿ ಸಚಿವರಾಗಿದ್ದಾರೆ. ಮಹತ್ವದ ಗೃಹಖಾತೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆಯನ್ನು ಇಟ್ಟುಕೊಂಡಿದ್ದ ಸಚಿವರು ಈಗ ಅಧಿಕಾರ ಕಳೆದುಕೊಂಡಿದ್ದಾರೆ.
ಜಿಲ್ಲೆಯ 8 ವಿಧಾನಸಭೆ ಕ್ಷೇತ್ರದಲ್ಲಿ ವಿಜಯಪುರ ನಗರ, ದೇವರಹಿಪ್ಪರಗಿ ಹಾಗೂ ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಮಲ ಅರಳಿದೆ. ಬಿಜೆಪಿಯ ವಿವಾದಾತ್ಮಕ ಶಾಸಕರೆಂದೆ ಗುರುತಿಸಿಕೊಂಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರಿಗೆ ಪೈಪೋಟಿ ನೀಡಲು ಬಿ.ಎಸ್.ಯಡಿಯೂರಪ್ಪ ಅವರ ಶಿಷ್ಯ ಎ.ಎಸ್. ಪಾಟೀಲ ನಡಹಳ್ಳಿ ಸಹ ಸಿದ್ದತೆ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾದರೆ ಜಿಲ್ಲಾವಾರು ಸಚಿವ ಸ್ಥಾನ ಹಂಚಿಕೆಯಾದರೆ ಬಸನಗೌಡ ಪಾಟೀಲ ಯತ್ನಾಳ ಹಾಗೂ ಎ.ಎಸ್. ಪಾಟೀಲ ನಡಹಳ್ಳಿ ನಡುವೆ ತೀವ್ರ ಪೈಪೋಟಿ ಉಂಟಾಗಲಿದೆ. ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಮೊದಲು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿರುವ ಕಾರಣ ಅವರು ಯಾವುದೇ ಪೈಪೋಟಿ ನೀಡಲು ಮುಂದಾಗುತ್ತಿಲ್ಲ ಎನ್ನಲಾಗಿದೆ.
ಹಿರಿತನದ ಆಧಾರದ ಮೇಲೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸಚಿವ ಸ್ಥಾನ ದೊರೆಯಬೇಕು. ಆದರೆ ಅವರು ಈ ಹಿಂದೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಇದೇ ಬಿ.ಎಸ್.ಯಡಿಯೂರಪ್ಪ ಅವರನ್ನು ಮನಬಂದಂತೆ ಬೈದಿದ್ದರು. ಬಿಜೆಪಿಯ ರಾಷ್ಟ್ರಿಯ ಪಕ್ಷಕ್ಕೂ ಡ್ಯಾಮೇಜ್ ರೀತಿ ಹೇಳಿಕೆ ನೀಡಿದ್ದರು. ಹಲವು ಸಲ ಪಕ್ಷಾಂತರ ಮಾಡಿರುವ ಕಾರಣ ಪಕ್ಷ ನಿಷ್ಠೆ ಅವರಲ್ಲಿ ಇಲ್ಲ ಎನ್ನುವ ಭಾವನೆ ರಾಷ್ಟ್ರೀಯ ಅಧ್ಯಕ್ಷರಿಗೂ ಇದೆ. ಇದರ ಜತೆ ವಿಜಯಪುರ ಜಿಲ್ಲಾ ಬಿಜೆಪಿಯ ಭಿನ್ನಮತದ ಮೂಲ ಕಾರಣವೇ ಯತ್ನಾಳ ಗೌಡ್ರರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಾಜಿ ಸಚಿವ ಅಪ್ಪು ಪಟ್ಟಣ ಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ ಸೇರಿದಂತೆ ಮಹಾನಗರ ಪಾಲಿಕೆಯ ಹಲವು ಬಿಜೆಪಿ ಸದಸ್ಯರು ಯತ್ನಾಳರ ವಿರೋಧಿಗಳಾಗಿ ಗುರುತಿಸಿಕೊಂಡಿದ್ದಾರೆ.
ಇದೇ ಕಾರಣಕ್ಕೆ ಮಹಾನಗರ ಪಾಲಿಕೆಯಲ್ಲಿ ಬಹುಮತವಿದ್ದರೂ ಸಹ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ ಎನ್ನುವುದು ಬಹಿರಂಗ ಸತ್ಯವಾಗಿದೆ.ಇದಲ್ಲದೇ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ ಅವರು ಗೌಡರಿಗೆ ಹೆಚ್ಚು ನಿಕಟವರ್ತಿಗಳು ಈ ಹಿಂದೆ ವಿಧಾನಪರಿಷತ್ ಚುನಾವಣೆ, ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ಗೌಡರಿಗೆ ಸಹಾಯ ಮಾಡಿದ ಆರೋಪ ಸಹ ಇದೆ. ಹೀಗಿರುವಾಗ ಅವರಿಗೆ ಸಚಿವ ಸ್ಥಾನ ನೀಡಿದರೆ ವಿಜಯಪುರ ಜಿಲ್ಲಾ ಬಿಜೆಪಿ ಅಧೋಗತಿಗೆ ಹೋಗುವುದರಲ್ಲಿ ಎರಡನೇ ಮಾತಿಲ್ಲ ಎನ್ನುವುದು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯವಾಗಿದೆ.ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಮುದ್ದೇಬಿಹಾಳ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ನಿಂದ ಬಂಡಾಯ ಎದ್ದು ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು.
ಮೊದಲು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ನಡಹಳ್ಳಿ ಪತ್ನಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಕೊನೆ ಗಳಿಗೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಸೇರಿ ಮುದ್ದೇಬಿಹಾಳ ಮತಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇವರ ಬಗ್ಗೆ ಯಡಿಯೂರಪ್ಪ ಅವರಿಗೆ ವಿಶೇಷ ಕಾಳಜಿ ಇದೆ. ಯತ್ನಾಳ ಗೌಡರಿಗೆ ಸಚಿವ ಸ್ಥಾನ ನೀಡದಿದ್ದರೇ ನಡಹಳ್ಳಿ ಇದರ ಸಂಪೂರ್ಣ ಲಾಭ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.
ದೇವರಹಿಪ್ಪರಗಿ ಶಾಸಕ ಸೋಮಗೌಡ ಪಾಟೀಲ (ಸಾಸನೂರ) ಮೊದಲು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರು ಮಿತಭಾಷಿಗಳು ಈ ಹಿಂದೆ ಕಾಂಗ್ರೆಸ್ ಆಪರೇಷನ್ ಹಸ್ತ ಮಾಡುತ್ತಿದೆ ಎನ್ನುವ ಗಾಳಿ ಸುದ್ದಿ ಹರಡಿದ್ದಾಗ, ಇವರ ಹೆಸರು ಮುಂಚೂಣಿಯಲ್ಲಿ ಕೇಳಿ ಬಂದಿತ್ತು. ಇವರ ತಂದೆ ಬಿ.ಎಸ್. ಪಾಟೀಲ ಸಾಸನೂರ ಕಾಂಗ್ರೆಸ್‍ಗರು ಆಗಿ ಸಚಿವ ಸ್ಥಾನ ಅನುಭವಿಸಿದ್ದರು. ಈಗ ಮೂವರು ಯಾರು ಶೇಷ್ಠರು ಎನ್ನುವುದನ್ನು ಬಿಜೆಪಿ ಹೈಕಮಾಂಡ ನಿರ್ಧರಿಸುವುದು ಮಾತ್ರ ಬಾಕಿ ಇದೆ. ಕಳೆದ 14 ತಿಂಗಳಲ್ಲಿ ಜಿಲ್ಲೆ ಮೂವರು ಸಚಿವರನ್ನು ಕಂಡಿದೆ. ಬಿಜೆಪಿ ಸರ್ಕಾರದಲ್ಲಿ ಕನಿಷ್ಠ ಒಬ್ಬರು ಸಚಿವರನ್ನಾದರೂ ಸಿಗುವ ಆಶಾಭಾವನೆ ಹೊಂದಿದೆ.