ವಿಜಯಪುರ: ಬಿಜೆಪಿಯ ಮಾಜಿ ಶಾಸಕ ರಮೇಶ ಬೂಸನೂರ್ ಪುತ್ರಿಯ ವಿವಾಹ ಕಾರ್ಯಕ್ರಮವು ಇಂದು ನಗರದಲ್ಲಿ ನಡೆಯಲಿದೆ.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ನಡೆಯಲಿದ್ದು, ಭವನದಲ್ಲಿ ವಿವಾಹ ಪೂರ್ವ ಶಾಸ್ತ್ರ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಜನರು ಭಾಗಿಯಾಗಿದ್ದರು.
ಕೊರೊನಾ ವೈರಸ್ ಮುಂಜಾಗೃತಾ ಕ್ರಮ ಇಲ್ಲದೇ ಕಾರ್ಯಕ್ರಮ ನಡೆಯುತ್ತಿದ್ದು, ಇದರಲ್ಲಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು. ಇಂದಿನ ವಿವಾಹ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಸೇರುವ ಸಾಧ್ಯತೆ ಇದೆ. ಈ ಕುರಿತು ಮಾತನಾಡಿದ ಮಾಜಿ ಶಾಸಕ ರಮೇಶ ಬೂಸನೂರ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅನಿವಾರ್ಯವಾಗಿ ಪುತ್ರಿ ವಿವಾಹ ಮಾಡುತ್ತಿದ್ದೇನೆ ಎಂದಿದ್ದಾರೆ.
ತಾಯಿ ಆಶಯದಂತೆ ಮದುವೆ ಮುಂದೂಡಿಲ್ಲ, ಇನ್ನೂರು ಜನರ ಸಮ್ಮುಖದಲ್ಲಿ ಮದುವೆ ಕಾರ್ಯ ನಡೆಯಲಿದೆ, ಹೆಚ್ಚಿನ ಜನರು ಬರಬೇಡಿ ಎಂದು ಮನವಿ ಮಾಡಿದ್ದೇನೆ. ಅಲ್ಲದೇ ಜಿಲ್ಲಾಧಿಕಾರಿ, ಎಸ್ಪಿ ಅವರಿಗೂ ಮನವಿ ಮಾಡಿದ್ದೇನೆ ಎಂದರು.
ಇನ್ನು ಸಿಂದಗಿ ಭಾಗದಿಂದ ವಾಹನಗಳನ್ನು ಬ್ಯಾರಿಕೇಡ್ ಹಾಕಿ ತಡೆಯಲು ವಿನಂತಿ ಮಾಡಿದ್ದೇನೆ. ನನ್ನ ಪಾಡಿಗೆ ನನ್ನ ಬಿಡಿ ಎಂದು ಮಾಜಿ ಶಾಸಕ ರಮೇಶ ಭೂಸನೂರ ಮನವಿ ಮಾಡಿದರು.