ವಿಜಯಪುರ: ಅರಿಷಿಣ ಕುಂಕುಮ ಹಾಗೂ ಉಡಿ ತುಂಬುವ ಮೂಲಕ ಮಹಿಳೆಯರು ನನ್ನ ಮೇಲೆ ಪ್ರೀತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನನ್ನ ಜಯ ಖಚಿತ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡ ಎಸ್.ಜಿ. ಪಾಟೀಲ್ ಶೃಂಗಾರಗೌಡ ಪಾಟೀಲ್ ನಿವಾಸದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಒಗ್ಗಟ್ಟು ಪ್ರದರ್ಶನ ಬಳಿಕ ಅವರು ಮಾತನಾಡಿದರು. ಜಿಗಜಿಣಗಿ ಜಿಲ್ಲೆಯ ಜನತೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದಕ್ಕೆ ಜನತೆಯೆ ಉತ್ತರ ನೀಡುತ್ತಿದ್ದಾರೆ. ಹದಿನೈದು ದಿನಗಳ ಹಿಂದೆ 1 ಲಕ್ಷ ಮತಗಳ ಅಂತರದಲ್ಲಿ ಆಯ್ಕೆಯಾಗುತ್ತೇನೆ ಎಂದಿದ್ದ ಜಿಗಜಿಣಗಿ ಅವರು ಇದೀಗ ಒಂದೇ ಒಂದು ಓಟಿನಿಂದಲೂ ನಾನು ಆಯ್ಕೆಯಾಗುತ್ತೇನೆ ಎನ್ನುತ್ತಿದ್ದಾರೆ. ಜಿಗಜಿಣಗಿ ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಮೈತ್ರಿ ಅಭ್ಯರ್ಥಿಯಾಗಿರುವ ತಮಗೆ ಒಂದು ಲಕ್ಷ ಮತಗಳ ಅಂತರದ ಗೆಲುವು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಮಾತನಾಡಿ, ರಾಜ್ಯಮಟ್ಟದಲ್ಲಿ ನಾಯಕರು ಹೊಂದಾಣಿಕೆ ಸೂತ್ರದಡಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಟಿಕೆಟ್ ಬಿಟ್ಟುಕೊಟ್ಟಿದ್ದಾರೆ. ನಾನು ಕೂಡಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡುವಂತೆ ಕೋರಿದ್ದೆವು. ಆದರೆ ಹೈಕಮಾಂಡ್ ಕೈಗೊಂಡಿರುವ ನಿರ್ಧಾರಕ್ಕೆ ನಾವೆಲ್ಲಾ ತಲೆ ಬಾಗಬೇಕಿದೆ. ಮೈತ್ರಿ ಅಭ್ಯರ್ಥಿ ಗೆಲುವಿಗೆ ನಾವೆಲ್ಲಾಲ ಶ್ರಮಿಸುತ್ತೇವೆ ಎಂದು ಹೇಳಿದರು.
ಈ ವೇಳೆ ಶಾಸಕ ದೇವಾನಂದ ಚವ್ಹಾಣ್, ಎಪಿಎಂಸಿ ಅಧ್ಯಕ್ಷ ಗುರು ತಾರನಾಳ, ಮುಖಂಡ ಎಸ್.ಜಿ. ಪಾಟೀಲ್ ಶೃಂಗಾರಗೌಡ್ರು, ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಜೆಡಿಎಸ್ ನಾಯಕಿ ಮಂಗಳಾದೇವಿ ಬಿರಾದಾರ, , ಬಸವರಾಜ ಸುಕಾಲಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಇದ್ದರು.