ವಿಜಯಪುರ: ಮಾನವೀಯ ದೃಷ್ಡಿಯಿಂದ ಮಹಾರಾಷ್ಟ್ರದ ಕೆಲ ಗ್ರಾಮಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಕೃಷ್ಣಾ ನದಿಯಿಂದ ಕಳೆದ ಮೂರು ವರ್ಷಗಳಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿ ಈ ವರ್ಷ ನೀರು ಬಿಡುಗಡೆ ಮಾಡಲಾಗಿದೆ ಹೊರತು ಇದರಲ್ಲಿ ಹೊಸ ಅರ್ಥ ಕಲ್ಪಿಸುವುದು ಬೇಡ ಎಂದರು.
ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ನಡುವೆ ಮಹಾರಾಷ್ಟ್ರದ ಜತ್ತ ಹಾಗೂ ಸಾಂಗ್ಲಿ ತಾಲೂಕಿನ 28 ಗ್ರಾಮಗಳಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಮಹಾರಾಷ್ಟ್ರ ಸರ್ಕಾರ ಕಳೆದ 40 ವರ್ಷಗಳಿಂದ ಕರ್ನಾಟಕಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಮಹಿಷ ಯೋಜನೆ ಜಾರಿಗೆ ತರಲು ವಿಳಂಬ ಮಾಡಿರುವ ಕಾರಣ ಕರ್ನಾಟಕ ಗಡಿಭಾಗಕ್ಕೆ ಹೊಂದಿರುವ ಹಳ್ಳಿಗಳ ಗ್ರಾಮಸ್ಥರು ನೀರಿಗಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಮಾನವೀಯ ದೃಷ್ಟಿಯಿಂದ ಆ ಹಳ್ಳಿಗಳಿಗೆ ನೀರು ಬಿಡುತ್ತಿದೆ. ಮುಂದೆಯೂ ನೀರು ಬಿಡುಗಡೆ ಮಾಡಲಾಗುವುದು ಎಂದರು.
ಇದೇ ಕಾರಣಕ್ಕೆ ಮಹಾರಾಷ್ಟ್ರದ ಹಲವು ಗ್ರಾಮಗಳು ಕರ್ನಾಟಕಕ್ಕೆ ಸೇರಲು ಬಯಸುತ್ತಿವೆ ಎಂದ ಅವರು ಗಡಿ ವಿವಾದ ಮುಗಿದ ಅಧ್ಯಾಯವಾಗಿದೆ ರಾಜಕೀಯ ಕಾರಣಕ್ಕೆ ಪ್ರತಿಬಾರಿ ಈ ವಿಷಯ ಮಹಾರಾಷ್ಟ್ರ ಸರ್ಕಾರ ಕೆಣಕುತ್ತಿದೆ ಎಂದು ಕಿಡಿಕಾರಿದರು.
ಮತ ಡಿಲೀಟ್ ವಿಚಾರಕ್ಕೆ ಪ್ರತಿಕ್ರಿಯೆ: ಅಲ್ಪಸಂಖ್ಯಾತರ ಮತ ಡಿಲೀಟ್ ಮಾಡಿದ್ದು ಸುಳ್ಳು ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ತಪ್ಪು ಮಾಡಿಲ್ಲ ಅಂದರೆ ಚಿಲುಮೆಯಲ್ಲಿ ಇಷ್ಟೆಲ್ಲ ಯಾಕೆ ರಾದ್ಧಾಂತ ಆಗ್ತಿತ್ತು ಎಂದು ಪ್ರಶ್ನಿಸಿದರು. ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿದೆ. ಆದರೆ, ಸಿಎಂ ಬೊಮ್ಮಾಯಿ ಸಾಹೇಬರೇ ಬಿಬಿಎಂಪಿ ಉಸ್ತುವಾರಿ ಸಚಿವರಿದ್ದಾರೆ. ನೈತಿಕ ಜವಾಬ್ದಾರಿ ಬೊಮ್ಮಾಯಿ ಹೊರಬೇಕಾಗುತ್ತೆ ಎಂದರು. ಸುಮ್ಮನೆ ಹಾಗೆ ಹೇಳುವ ಅಗತ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿಕೆಗೆ ಎಂ ಬಿ ಪಾಟೀಲ್ ಟಾಂಗ ನೀಡಿದರು.
ಬೆಂಗಳೂರಿನ ಚಿಲುಮೆ ಸಂಸ್ಥೆಯಲ್ಲಿ ಏನಾಗಿದೆ ಅಂತ ಬೊಮ್ಮಾಯಿಯವರಿಗೆ ಗೊತ್ತು. ಬಿಬಿಎಂಪಿಗೆ ಬೊಮ್ಮಾಯಿ ಉಸ್ತುವಾರಿ ಸಚಿವರು ಇದ್ದಾರೆ ತಾನೆ, ಹಾಗಾದರೆ ಏನು ತಪ್ಪು ಆಗಿಲ್ಲ ಎಂದಾದರೇ ಯಾಕೆ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಯಾರು ತಪ್ಪಿತಸ್ಥರಿಲ್ಲ ಎಂದರೆ ಸಸ್ಪೆಂಡ್ ಮಾಡಿದ್ದು ಏಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಬಸವರಾಜ್ ಬೊಮ್ಮಾಯಿ