ಮುದ್ದೇಬಿಹಾಳ : ಪತ್ನಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸೋತ ದ್ವೇಷದಿಂದ ಪಡಿತರ ವಿತರಣೆಯಲ್ಲಿ ಅನ್ಯಾಯ ಮಾಡಿದ್ದ ನ್ಯಾಯಬೆಲೆ ಅಂಗಡಿಯವನಿಗೆ ಮತ್ತೆ ಪಡಿತರ ವಿತರಿಸಲು ಅವಕಾಶ ನೀಡಬಾರದು ಎಂದು ತಾಲೂಕಿನ ಅಡವಿ ಹುಲಗಬಾಳ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಗ್ರಾ. ಪಂ ಚುನಾವಣೆಯಲ್ಲಿ ಸೋತಿದ್ದಕ್ಕಾಗಿ ದ್ವೇಷದಿಂದ ಗ್ರಾಮ ಮತ್ತು ತಾಂಡಾದ 200 ಅಧಿಕ ಕುಟುಂಬಗಳಿಗೆ ಪಡಿತರ ವಿತರಿಸದೆ ನ್ಯಾಯಬೆಲೆ ಅಂಗಡಿಯಾತ ಅನ್ಯಾಯ ಮಾಡುತ್ತಿದ್ದ. ಗ್ರಾಮಸ್ಥರು ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ ಕಾರಣ, ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದಾಗಿದೆ. ಹಾಗಾಗಿ, ಆತನಿಗೆ ಮತ್ತೆ ಪಡಿತರ ವಿತರಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಗ್ರಾಮಸ್ಥರು ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದ ಗ್ರಾ.ಪಂ ಅಧ್ಯಕ್ಷ ದ್ಯಾಮಣ್ಣ ಹಂಚಿನಾಳ ಮಾತನಾಡಿ, ಅಡವಿ ಹುಲಗಬಾಳದಲ್ಲಿ ಪಡಿತರ ವಿತರಿಸುವ ಚನ್ನಬಸಪ್ಪ ಗುಡಗುಂಟಿ, ಕಳೆದ ಗ್ರಾ.ಪಂ ಚುನಾವಣೆಯಲ್ಲಿ ತನ್ನ ಪತ್ನಿಯನ್ನು ಸ್ಪರ್ಧೆಗೆ ನಿಲ್ಲಿಸಿದ್ದನು. ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದರು. ಈ ಕಾರಣಕ್ಕೆ ಗ್ರಾಮಸ್ಥರಿಗೆ ಸರಿಯಾಗಿ ಪಡಿತರ ಹಂಚುತ್ತಿರಲಿಲ್ಲ. ಈ ಬಗ್ಗೆ ಕೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಚುನಾವಣೆಯಲ್ಲಿ ನನ್ನ ಹೆಂಡತಿಯನ್ನು ಸೋಲಿಸಿದ ದುಷ್ಟ ಜನರು ನೀವು, ನಿಮ್ಮಂತಹ ನಾಲಾಯಕರಿಗೆ ಅಕ್ಕಿ, ಗೋಧಿ ಯಾಕೆ ಕೊಡಬೇಕು ? ಅಕ್ಕಿ, ಗೋಧಿ ಒಯ್ಯಲು ನಾಚಿಕೆಯಾಗುವುದಿಲ್ಲವೇ ? ಬೈದಿದ್ದಾನೆ. ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಅದರಂತೆ, ಚನ್ನಬಸಪ್ಪನ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಗಲಾಟೆ ಬಿಡಿಸಲು ಬಂದ ಪೊಲೀಸರ ಮೇಲೆ ಹಲ್ಲೆ : 2 ಗುಂಪಿನ 16 ಮಂದಿ ಬಂಧನ
ಅಂಗಡಿ ಪರವಾನಗಿ ರದ್ದಾಗಿರುವುದನ್ನು ತಿಳಿದ ಪಡಿತರ ಅಂಗಯಾತ ಚನ್ನಬಸಪ್ಪ ಗುಡಗುಂಟಿ, ಊರಿನ ಕೆಲ ಮುಗ್ಧ ಜನರು ಮತ್ತು ಹಣ ಕೊಟ್ಟು ಕರೆಸಿಕೊಂಡ ಕೆಲವರನ್ನು ಮುದ್ದೇಬಿಹಾಳ ತಹಶೀಲ್ದಾರ್ ಕಚೇರಿಗೆ ಕರೆದುಕೊಂಡು ಹೋಗಿ ತಮಗೆ ಅನ್ಯಾಯವಾಗಿದೆ ಎಂದು ಸುಳ್ಳು ದೂರು ಕೊಡಿಸಿದ್ದಾನೆ. ಅಲ್ಲದೆ ಈ ವಿಷಯದಲ್ಲಿ ಕೆಲವರು ರಾಜಕೀಯ ಕೂಡ ಮಾಡುತ್ತಿದ್ದಾರೆ. ಆಹಾರ ನಿಗಮದ ಅಧ್ಯಕ್ಷ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಅವರ ಕೈವಾಡವಿದೆ ಎಂದು ಧಿಕ್ಕಾರ ಕೂಗಿಸಿ ವಿನಾಕಾರಣ ಅಪಪ್ರಚಾರ ನಡೆಸಲಾಗಿದೆ. ಒಬ್ಬ ಸರ್ಕಾರಿ ಪಡಿತರ ವಿತರಕರನಾಗಿರುವ ಚನ್ನಬಸಪ್ಪ ಗುಡಗುಂಟಿ ಶಾಸಕರು, ಅಧಿಕಾರಿಗಳು, ತಹಶೀಲ್ದಾರ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾನೆ. ಈತನಿಗೆ ಮರಳಿ ಪಡಿತರ ವಿತರಣೆಯ ಜವಾಬ್ದಾರಿಯನ್ನು ನೀಡಿದರೆ ಮತ್ತೆ ತನ್ನ ಅಕ್ರಮವನ್ನು ಮುಂದುವರೆಸುತ್ತಾನೆ. ತಾತ್ಕಾಲಿಕವಾಗಿ ಸಮೀಪದ ಗೋನಾಳ ಎಸ್.ಎಚ್. ಗ್ರಾಮದ ಚೇರಮನ್ ಗ್ರಾಮ ಮಂಡಳದ ಮೂಲಕ ಆಹಾರ ಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮತ್ತೆ ಚನ್ನಬಸಪ್ಪನಿಗೆ ಪರವಾನಗಿ ಕೊಟ್ಟರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಪ್ರಭಾರಿ ತಹಶೀಲ್ದಾರ್ ಅನಿಲ್ ಕುಮಾರ್ ಢವಳಗಿ, ಈ ಬಗ್ಗೆ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.