ವಿಜಯಪುರ: ಕೊರೊನಾ ಭೀತಿ ಕೇವಲ ಶಿಕ್ಷಣ ಕ್ಷೇತ್ರದ ಮೇಲೆ ಮಾತ್ರ ಪ್ರಭಾವ ಬೀರಿಲ್ಲ. ಅದು ಕೃಷಿ ಕ್ಷೇತ್ರದಲ್ಲಿಯೂ ತಲ್ಲಣ ಮೂಡಿಸಿದೆ. ಮಹಾನಗರದಲ್ಲಿ ಉದ್ಯೋಗ ಕಳೆದುಕೊಂಡು ತವರಿಗೆ ವಾಪಸ್ ಬಂದಿರುವ ಯುವ ಜನತೆಗೆ ಈಗ ಕೃಷಿಯೊಂದೇ ಉಳಿದ ಮಾರ್ಗವಾಗಿದೆ. ಆದರೆ, ಕೃಷಿ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲದ ಯುವಕರು ಈಗ ಹೆಚ್ಚಾಗಿ ಕೃಷಿ ತಜ್ಞರತ್ತ ಮುಖ ಮಾಡಿದ್ದಾರೆ. ಅಂತಹವರಿಗಾಗಿಯೇ ವಿಜಯಪುರದ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಆನ್ಲೈನ್ ತರಬೇತಿಗೆ ಮುಂದಾಗಿದೆ.
ಕೊರೊನಾದಿಂದ ಪಟ್ಟಣ ಪ್ರದೇಶದಲ್ಲಿ ದುಡಿಯಲು ಹೋಗಿರುವ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡು ತವರಿಗೆ ವಾಪಸ್ ಆಗಿದ್ದಾರೆ. ಇವರ ದುಡಿಮೆಯೇ ಸಂಸಾರದ ಅನ್ನಕ್ಕೆ ದಾರಿಯಾಗಿತ್ತು. ಈಗ ಉದ್ಯೋಗವಿಲ್ಲದ ಕಾರಣ ತಮ್ಮ ಗ್ರಾಮದಲ್ಲಿದ್ದ ಹೊಲದಲ್ಲಿ ಮತ್ತೆ ಕೃಷಿ ಮಾಡುವತ್ತ ಮುಖ ಮಾಡಿದ್ದಾರೆ. ಆದರೆ, ಸೂಕ್ತ ತರಬೇತಿ ಇಲ್ಲದ ಕಾರಣ ಕೃಷಿಯಲ್ಲಿ ಕೈ ಸುಟ್ಟುಕೊಳ್ಳುವ ಭಯ ಅವರನ್ನು ಕಾಡುತ್ತಿದೆ. ಇದನ್ನು ಹೋಗಲಾಡಿಸಲು ವಿಜಯಪುರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅಧಿಕಾರಿಗಳು ಆನ್ ಲೈನ್ ಮೊರೆ ಹೋಗಿದ್ದಾರೆ. ಕೃಷಿ ತರಬೇತಿ ಕೇಂದ್ರದ ವ್ಯಾಪ್ತಿಗೆ ಬರುವ ಉತ್ತರ ಕರ್ನಾಟಕದ 13 ಜಿಲ್ಲೆಯ ರೈತರನ್ನು ಆನ್ ಲೈನ್ ಮೂಲಕ ಭೇಟಿಯಾಗುವ ಯೋಜನೆ ಹಾಕಿಕೊಳ್ಳಲಾಗಿದೆ.


ಇಂಟರ್ನೆಟ್ ಮೂಲಕ ಗೂಗಲ್ ಮೀಟ್, ಫೇಸ್ ಬುಕ್ ಲೈವ್ ಹಾಗೂ ಝೂಮ್ ಆ್ಯಪ್ ಮೂಲಕ ಯುವ ಹಾಗೂ ವೃತ್ತಿಪರ ರೈತರನ್ನು ಸಂಪರ್ಕಿಸಿ, ಕೃಷಿಯಲ್ಲಿನ ತೊಂದರೆ, ಸಾವಯವ ಕೃಷಿ ಪದ್ದತಿ, ಹವಾಮಾನ ಆಧರಿತ ಕೃಷಿ ಚಟುವಟಿಕೆ ಕುರಿತು ಆನ್ ಲೈನ್ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಮೊದಲು ಆಸಕ್ತ ರೈತರನ್ನು ಹಾಗೂ ಕೃಷಿ ತಜ್ಞರ ನ್ನು ಒಂದುಗೂಡಿಸಿ, ತರಬೇತಿ, ಸಂವಾದಗಳನ್ನು ಏರ್ಪಡಿಸಲಾಗುತ್ತಿತ್ತು. ಈಗ ಕೊರೊನಾ ಹಿನ್ನೆಲೆಯಲ್ಲಿ ಇದು ಸಾಧ್ಯವಾಗದ ಕಾರಣ ಕೃಷಿ ತಜ್ಞರು ಸಹ ಆನ್ಲೈನ್ಗೆ ಮೊರೆ ಹೋಗಿದ್ದಾರೆ. ಇದಕ್ಕೆ ಯುವ ರೈತರು ಸೇರಿ ಎಲ್ಲ ವರ್ಗದ ರೈತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.

ರೈತರ ಅನುಕೂಲಕ್ಕಾಗಿ ತಿಂಗಳಲ್ಲಿ 4 ಆನ್ಲೈನ್ ಕ್ಲಾಸ್ ನಡೆಯುತ್ತಿತ್ತು. ಈಗ ರೈತರ ಬೇಡಿಕೆ ಹೆಚ್ಚಾದ ಕಾರಣ ನಿತ್ಯ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಇಂದು ಆನ್ಲೈನ್ನಲ್ಲಿ ಕೃಷಿಯ ಯಾವ ವಿಷಯವನ್ನು ಚರ್ಚೆ ಮಾಡಲಾಗುತ್ತದೆ ಎಂದು ಮೊದಲೇ ರೈತರಿಗೆ ವಾಟ್ಸ್ಆ್ಯಪ್ ಮೂಲಕ ಸಂದೇಶ ರವಾನಿಸಲಾಗುತ್ತದೆ. ಅದಕ್ಕಾಗಿ ಹಲವು ಗ್ರೂಪ್ಗಳನ್ನ ರಚಿಸಲಾಗಿದೆ. ಇದರ ಜೊತೆ ಅವಶ್ಯಕ ರೈತರ ಬೇಡಿಕೆ ಅನುಸಾರವಾಗಿ ಅಧಿಕಾರಿಗಳು ಅವರ ಹೊಲಕ್ಕೆ ಸಹ ಭೇಟಿ ನೀಡಿ ಸೂಕ್ತ ಸಲಹೆಗಳನ್ನು ನೀಡುತ್ತಿದ್ದಾರೆ.