ವಿಜಯಪುರ: ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ಕೊರೊನಾ ವೈರಸ್ ಸೋಂಕಿತ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾಹಿತಿ ನೀಡಿದ್ದು, ಪಾಸಿಟಿವ್ ಬಂದ ಮಹಿಳೆ ಮಹಾರಾಷ್ಟ್ರದಿಂದ ಬಂದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ ಎಂದರು.
ಸೋಂಕಿತ ಮಹಿಳೆ ರೋಗಿ ನಂ. 221 ಆಗಿದ್ದು, ನಗರದ ಗೋಲಗುಮ್ಮಟ ವ್ಯಾಪ್ತಿಯ ಚಪ್ಪರಬಂದ್ ಕಾಲೋನಿಯ ನಿವಾಸಿಯಾಗಿದ್ದಾಳೆ. ಈಕೆ 60 ವರ್ಷದವಳಾಗಿದ್ದು, ಬಿಪಿ, ಶುಗರ್ ನಿಂದ ಬಳಲುತ್ತಿದ್ದಾಳೆ. ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಮಹಿಳೆಯ ವರದಿ ಪಾಸಿಟಿವ್ ಬಂದ ನಂತರ ಆಕೆ ವಾಸವಿದ್ದ ಚಪ್ಪರಬಂದ್ ಬಡಾವಣೆ ಹಾಗೂ ಗೋಲಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ ಎಂದರು.
ವಿಜಯಪುರದಿಂದ 110 ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಅದರಲ್ಲಿ 80 ರಿಪೋರ್ಟ್ ನೆಗೆಟಿವ್ ಬಂದಿವೆ. ಈ ಪೈಕಿ ಒಂದು ಪ್ರಕರಣ ಮಾತ್ರ ಪಾಸಿಟಿವ್ ಬಂದಿದೆ ಎಂದರು. ಇನ್ನುಳಿದ 29 ಸ್ಯಾಂಪಲ್ ಗಳ ವರದಿಗಾಗಿ ಕಾಯುತ್ತಿದ್ದೇವೆ ಎಂದು ವಿವರಿಸಿದ್ರು.
ಪಾಸಿಟಿವ್ ವರದಿ ಬಂದಿರುವ ಮಹಿಳೆಯ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ. ಆ ವೃದ್ಧೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯಕ್ಕೆ ಆರೋಗ್ಯ ಸ್ಥಿರವಾಗಿದೆ ಎಂದರು.
ಕೊರೊನಾ ಪಾಸಿಟಿವ್ ಮಹಿಳೆಯದ್ದು ಅವಿಭಕ್ತ ಕುಟುಂಬ!:
ಕೊರೊನಾ ಪಾಸಿಟಿವ್ ಬಂದಿರುವ ಮಹಿಳೆಯದ್ದು ಅವಿಭಕ್ತ ಕುಟುಂಬವಂತೆ. ಮನೆಯಲ್ಲಿ 25 ಜನ ವಾಸವಿದ್ದರು. ಮಹಿಳೆ ಪತಿ ನಿವೃತ್ತ ಸರ್ಕಾರಿ ನೌಕರನಾಗಿದ್ದು, ಸದ್ಯ ಗೋಲಗುಮ್ಮಟ ಬಳಿ ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದರಂತೆ. ಮಹಿಳೆ, ಆಕೆಯ ಪತಿ, ಮೈದುನ, ಮಕ್ಕಳು ಒಟ್ಟಿಗೆ ವಾಸವಿದ್ದರು. ಒಂದು ವಾರದ ಹಿಂದೆ ಮಹಿಳೆ ತನ್ನ ಕುಟುಂಬದ ಕೆಲ ಸದಸ್ಯರ ಜತೆ ಮಹಾರಾಷ್ಟ್ರದ ಇಚಲಕರಂಜಿಗೆ ಸಂಬಂಧಿಕರ ಅಂತ್ಯಕ್ರಿಯೆಗೆ ಹೋಗಿ ಬಂದಿದ್ದರಂತೆ. ಅಲ್ಲಿಯೇ ಸೋಂಕು ತಗುಲಿರಬಹುದು ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಸದ್ಯ ಮಹಿಳೆಯ ಕುಟುಂಬಸ್ಥರು, ಅವರ ಜತೆ ಓಡಾಡಿದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಅವರ ವೈದ್ಯಕೀಯ ವರದಿ ಮೇಲೆ
ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಡಿಸಿ ವೈ.ಎಸ್.ಪಾಟೀಲ ತಿಳಿಸಿದ್ರು.