ವಿಜಯಪುರ : ಜಿಲ್ಲೆಯಲ್ಲಿ ಇಂದು ಓರ್ವ ಕೋವಿಡ್-19 ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈವರೆಗೆ ಒಟ್ಟು 23 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2313 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರಲ್ಲಿ 2176 ನೆಗೆಟಿವ್ ವರದಿ ಬಂದಿವೆ. 90 ಜನರ ವೈದ್ಯಕೀಯ ವರದಿ ಇನ್ನೂ ಬರಬೇಕಾಗಿದೆ. ಒಟ್ಟು 424 ಜನರು 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 1577 ಜನ 28 ದಿನಗಳ ರೀಪೋರ್ಟಿಂಗ್ ಅವಧಿಯಲ್ಲಿದ್ದಾರೆ. 2004 ಜನರ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಲ್ಯಾಬ್ ಟೆಸ್ಟಿಂಗ್ ಕಾರ್ಯವು ಸಮರ್ಪಕವಾಗಿ ನಡೆಯುತ್ತಿದೆ. ಉಳಿದಂತೆ ಕೆಲವು ಮಾದರಿಗಳನ್ನು ಸರ್ಕಾರದ ನಿರ್ದೇಶನದಂತೆ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಮುಂದಿನ ಒಂದು ವಾರದೊಳಗೆ ಇನ್ನೂ 8-10 ಜನರು ಬಿಡುಗಡೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು. ಪ್ರತಿದಿನ ನಿರ್ಬಂಧಿತ ವಲಯದಲ್ಲಿ ಸಮೀಕ್ಷೆ ನಡೆಸಿ, ಮಾಹಿತಿ ಪಡೆಯಲಾಗುತ್ತಿದೆ. ಕೆಲವರ ಸ್ವ್ಯಾಬ್ ಟೆಸ್ಟ್ ಕೂಡಾ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಕೆಲವು ಶಂಕಿತ ರೋಗಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ.
ತುರ್ತು ಸಂದರ್ಭಗಳಲ್ಲಿ ಸೇವೆಗೆ ಒಂದು ಆ್ಯಂಬುಲೆನ್ಸ್ ವ್ಯವಸ್ಥೆಗೂ ನಿರ್ದೇಶನ ನೀಡಲಾಗಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಒಪಿಡಿಯಲ್ಲಿ ಹೆಚ್ಚಿನ ವೈದ್ಯರುಗಳನ್ನು ನೇಮಿಸಲಾಗಿದೆ. ಗರ್ಭಿಣಿಯರಿಗೆ ಇದೇ ವೇಳೆ ವಿಶೇಷ ವೈದ್ಯರನ್ನೂ ನೇಮಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.