ವಿಜಯಪುರ : ಜಿಲ್ಲೆಯಾದ್ಯಂತ ತೀವ್ರ ಶ್ವಾಸಕೋಶ ತೊಂದರೆ, ನೆಗಡಿ, ಕೆಮ್ಮು, ಜ್ವರ ಸಂಬಂಧಿಸಿದ ಯಾವುದೇ ರೋಗಿಗಳನ್ನು ಯೂನಾನಿ, ಆರ್ಯುವೇದ, ಹೋಮಿಯೊಪತಿ ವೈದ್ಯರು ಚಿಕಿತ್ಸೆ ಮಾಡದೇ, ನುರಿತ ವೈದ್ಯರ ಬಳಿ ಅಂತಹ ರೋಗಿಗಳನ್ನು ಕಳುಹಿಸಬೇಕೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್-19 ವೈರಸ್ಗೆ ಸಂಬಂಧಿಸಿದಂತೆ , ಆರೋಗ್ಯ ಇಲಾಖೆ ಅಧಿಕಾರಿಳು ಮತ್ತು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಕೊರೊನಾ ವೈರಸ್ ಅನ್ನು ಸೂಕ್ಷ್ಮವಾಗಿ ತಜ್ಞ ವೈದ್ಯರಿಂದ ಉಪಚರಿಸುವುದು ಅತ್ಯವಶ್ಯಕವಾಗಿದ್ದು, ಶ್ವಾಸಕೋಶ ಸಮಸ್ಯೆ, ನೆಗಡಿ, ಕೆಮ್ಮು, ಜ್ವರ ಸಂಬಂಧಿತ ರೋಗಿಗಳು ತಕ್ಷಣ ತಜ್ಞ ವೈದ್ಯರ ಬಳಿ ಕಳುಹಿಸಿ ಬರುವಂತೆ ಆದೇಶ ನೀಡಲಾಗಿದೆ.
ಯೂನಾನಿ, ಹೋಮಿಯೊಪತಿ, ಆಯುರ್ವೇದ ವೈದ್ಯರು ಯಾವುದೇ ಸಂದರ್ಭದಲ್ಲಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ವಿಳಂಬ ಮಾಡದೆ ತಜ್ಞ ವೈದ್ಯರ ಬಳಿಗೆ ಕಳುಹಿಸಿಕೊಡುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್-19 ರೋಗಿಗಳಿಗೆಂದು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯಾ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ಹಾಗೂ ಫೀವರ್ ಕ್ಲೀನಿಕ್‍ಗಳು, ಕೊರೊನಾ ಆಸ್ಪತ್ರೆಗಳು ಕಡ್ಡಾಯವಾಗಿ ವ್ಯವಸ್ಥಿತವಾಗಿ ದಾಖಲಿಕೊಳ್ಳಬೇಕು. ಯಾವುದೇ ರೀತಿಯ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಅಂತಹವರಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಬೇಕು. ಸಾರ್ವಜನಿಕರು ಕೂಡಾ ಸೂಕ್ತ ಸಮಯಕ್ಕೆ ಮಾಹಿತಿ ನೀಡಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಚಿಕಿತ್ಸೆಗೆ ಒಳಪಡುತ್ತಿರುವ ಕೊರೊನಾ ಪಾಸಿಟಿವ್ ರೋಗಿಗಳಿಗೆ ಸಂಪೂರ್ಣ ಗುಣಮುಖರಾಗುವವರೆಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ನೆಗೆಟಿವ್ ಕಂಡು ಬಂದರೂ ಕೂಡಾ ಎರಡು ಬಾರಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಖಾತ್ರಿಗೊಂಡಾಗ ಮಾತ್ರ ಬಿಡುಗಡೆ ಗೊಳಿಸಬೇಕು. ಅದರಂತೆ ಕೋವಿಡ್ ಜೊತೆಗೆ ಇತರ ಖಾಯಿಲೆಗಳ ಸಮರ್ಪಕ ಚಿಕಿತ್ಸೆ ಮತ್ತು ರೋಗಿಯ ಗುಣಮುಖ ಆಧಾರದ ಮೇಲೆ ಆಸ್ಪತ್ರೆಗಳಿಂದ ಬಿಡುಗಡೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.