ವಿಜಯಪುರ: ಕರ್ನಾಟಕ ರಕ್ಷಣಾ ವೇದಿಕೆಯನ್ನು ಕಳ್ಳರ ರಕ್ಷಣಾ ವೇದಿಕೆ ಎಂದು ಟೀಕಿಸಿದ್ದ ನಗರ ಶಾಸಕ ಬಸನಗೌಡ ಪಾಟೀಲ ವಿರುದ್ಧ ರಕ್ಷಣಾ ವೇದಿಕೆ ಕಿಡಿಕಾರಿದೆ. ಡಿ.5ರಂದು ವಿಜಯಪುರದಲ್ಲಿ ಬಂದ್ ಮಾಡಿಯೇ ತೀರುತ್ತೇವೆ ಎಂದು ಕರವೇ ಜಿಲ್ಲಾಧಕ್ಷ ಮರು ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ, ನಗರ ಶಾಸಕರು ಕನ್ನಡ ಪರ ಸಂಘಟನೆಗಳ ಬಗ್ಗೆ ಹಗುರಾಗಿ ಮಾತನಾಡುತ್ತಿದ್ದಾರೆ. ಮೊದಲು ತಾವು ಎಷ್ಟು ಭ್ರಷ್ಟರಿದ್ದೀರಿ, ಕೋಮುಗಲಭೆಗೆ ಪ್ರಚೋದನೆ ಮಾಡುತ್ತೀರಿ ಎನ್ನುವುದನ್ನು ಅರಿತು ಮಾತನಾಡಿ ಎಂದು ಎದುರೇಟು ನೀಡಿದರು. ನಿಮ್ಮ ರಾಜಕೀಯ ಇತಿಹಾಸ ನೋಡಿಕೊಳ್ಳಿ. ನಿಮ್ಮಂತ ಭ್ರಷ್ಟ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸುವ ಸಂಘಟನೆ ಕರವೇ. ಮೊದಲು ನಿಮ್ಮ ಎದೆಯ ಮೇಲೆ ಕೈ ಇಟ್ಟು ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.
ಮತ್ತೆ ಕನ್ನಡ ಪರ ಸಂಘಟನೆಗಳ ವಿರುದ್ಧ ಯತ್ನಾಳ್ ಗುಡುಗು
ಒಬ್ಬರನ್ನು ಕೇವಲವಾಗಿ ನೋಡುವುದನ್ನು ಮೊದಲು ಬಿಡಿ. ನಿಮ್ಮ ಬಾಯಿ ಚಪಲಕ್ಕೆ ಮತ್ತೊಬ್ಬರನ್ನು ಹಿಯಾಳಿಸುವದನ್ನು ನಿಲ್ಲಿಸಿ. ಎಂಇಎಸ್ ಏಜೆಂಟರಂತೆ ವರ್ತಿಸಬೇಡಿ. ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಎಂಇಎಸ್ ಅವರನ್ಮು ಓಲೈಸುವ ಸರ್ಕಾರದ ನಿರ್ಧಾರ ಖಂಡಿಸಿ ಡಿ.5ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ನಮ್ಮ ಬೆಂಬಲ ಇದೆ. ಅಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಮುಲ್ಲಾ ತಿಳಿಸಿದರು.