ವಿಜಯಪುರ: ಖಾಸಗಿ ಕಂಪನಿಯಲ್ಲಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುವ ಬದಲು ತಾನೇ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಬಹುದು ಎಂದು ಯೋಚಿಸಿದ ಯುವ ರೈತನೋರ್ವ ಇಂದು ಕೃಷಿಯಲ್ಲೇ ಖುಷಿ ಕಂಡುಕೊಂಡಿದ್ದಾನೆ. ಸ್ವಾಭಿಮಾನದ ಬದುಕು ಸಾಗಿಸಲು ಸ್ವಗ್ರಾಮಕ್ಕೆ ಮರಳಿ ಸ್ವಂತ ಕೃಷಿಯಲ್ಲಿ ತೊಡಗಿಸಿಕೊಂಡ ಯುವಕನೋರ್ವ ಅದರಲ್ಲಿ ಯಶಸ್ಸು ಸಾಧಿಸಿ ಲಕ್ಷಾಧೀಶನಾಗಿದ್ದಾನೆ.
ಹೌದು, ತಾಲೂಕಿನ ಹಡಗಲಿ ಗ್ರಾಮದ ಸಿದ್ದು ರಾಮಪ್ಪ ಶೀಳಿನ್ ಎಂಬ ಯುವ ರೈತ ಐಟಿಐ ಮುಗಿಸಿ ಪುಣೆ, ಬೆಂಗಳೂರು ಸೇರಿದಂತೆ ವಿವಿಧ ಕಡೆ 6 ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು. ಬೇರೆಯವರ ಕೈ ಕೆಳಗೆ ಸೇವೆ ಮಾಡಿ ಬೇಸತ್ತು ಉದ್ಯೋಗಕ್ಕೆ ರಾಜೀನಾಮೆ ನೀಡಿ ತನ್ನ ಸ್ವಗ್ರಾಮಕ್ಕೆ ಮರಳಿದ ಸಿದ್ದು, ತಮ್ಮ ಬಳಿಯಿರುವ ಒಂದು ಎಕರೆ ಜಮೀನಿನಲ್ಲಿ ಪೇರಲೆ ಹಣ್ಣನ್ನು ಬೆಳೆದು ಲಕ್ಷಾಂತರ ರೂ. ಆದಾಯ ಗಳಿಸುತ್ತಾ ತನ್ನ ಕುಟುಂಬದ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ನೈಸರ್ಗಿಕ ಗೊಬ್ಬರ ಬಳಕೆ :
ಸಿದ್ದು ಅವರಿಗೆ ಸಹೋದರ ಮಲ್ಲು ಹಾಗೂ ಅಳಿಯ ಪರಮಾನಂದ ಕೈ ಜೋಡಿಸಿದ್ದಾರೆ. ಇವರು ಕೇರಳ ಹಾಗೂ ಥೈಲ್ಯಾಂಡ್ನಿಂದ ವಿಎನ್ಆರ್ ತಳಿಯ ಪೇರಲೆ ಹಣ್ಣುಗಳ ತಳಿಗಳನ್ನು ತಂದು ತಮ್ಮ ಜಮೀನಿನಲ್ಲಿ ನಾಟಿ ಮಾಡಿದ್ದಾರೆ. ಅದಕ್ಕೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಗೋ ಮೂತ್ರ, ಸಗಣಿ ಸೇರಿದಂತೆ ನೈಸರ್ಗಿಕವಾಗಿ ದೊರೆಯುವ ಗೊಬ್ಬರವನ್ನು ಬಳಸಿ ಒಂದು ವರ್ಷದ ಅವಧಿಯಲ್ಲಿ 2 ಲಕ್ಷ ರೂ.ಗಳಷ್ಟು ಆದಾಯ ಗಳಿಸಿದ್ದಾರೆ. ಇದಕ್ಕೆ ಕೇವಲ 70-80 ಸಾವಿರ ರೂ. ಖರ್ಚು ಮಾಡಿದ್ದು, ಯಾವುದೇ ಕೆಲಸಗಾರರ ಅವಶ್ಯಕತೆ ಇಲ್ಲದೆ ಮನೆಯವರೇ ಸೇರಿಕೊಂಡು ಪೇರಲೆ ಹಣ್ಣನ್ನು ಬೆಳೆದು ಯಶಸ್ವಿ ಆಗಿದ್ದಾರೆ.
ಒಂದು ಹಣ್ಣು 2 ಕೆಜಿಗೂ ಅಧಿಕ ತೂಕ:
ಈ ಯುವ ರೈತರು ವಿಭಿನ್ನ ಮಾದರಿಯ ಪೇರಲೆ ಹಣ್ಣಿನ ತಳಿಯನ್ನು ಬೆಳೆದ ಪರಿಣಾಮ ಒಂದು ಗಿಡದಲ್ಲಿ 10 ರಿಂದ 15 ಪೇರಲೆ ಹಣ್ಣು ಬಿಟ್ಟಿದ್ದು, ಒಂದು ಹಣ್ಣು ಬರೋಬ್ಬರಿ 2 ಕೆಜಿಯಷ್ಟು ತೂಕ ತೂಗುತ್ತದೆ. ಈ ಹಣ್ಣಿಗೆ ಬೇರೆ ರಾಜ್ಯಗಳಲ್ಲಿ ಬಹಳ ಬೇಡಿಕೆ ಹಾಗೂ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಹೊರ ರಾಜ್ಯ, ದೇಶಗಳಿಂದ ವಿವಿಧ ಕಂಪನಿಗಳು ಇವರ ತೋಟಕ್ಕೆ ಬಂದು ಹಣ್ಣು ಕಟಾವು ಮಾಡಿಕೊಂಡು ಹೋಗುತ್ತಾರಂತೆ. ನಾಟಿ ಮಾಡುತ್ತಿರುವಾಗಲೇ ಹಣ್ಣಿಗೆ ಬೆಲೆ ನಿಗದಿ ಪಡಿಸಿ ಗುತ್ತಿಗೆ ಪಡೆದುಕೊಳ್ಳುತ್ತಾರಂತೆ.
ಬರದ ನಾಡಲ್ಲಿ ಬಂಗಾರ:
ಬರದನಾಡು ವಿಜಯಪುರ ಜಿಲ್ಲೆಯಲ್ಲಿ ಬೇಸಿಗೆ ಅವಧಿ ಕನಿಷ್ಠ 40 ಡಿಗ್ರಿ ಉಷ್ಣಾಂಶ ಇರುತ್ತದೆ. ಈ ಜಿಲ್ಲೆಯಲ್ಲಿ ಥೈಲ್ಯಾಂಡ್ ವಿಎನ್ಆರ್ ತಳಿಯ ಪೇರಲೆ ಗಿಡಗಳನ್ನು ಪರಿಚಯಿಸಿದ ಕೀರ್ತಿ ಶೀಳಿನ್ ಕುಟುಂಬಕ್ಕೆ ಸಲ್ಲುತ್ತದೆ. ಗುತ್ತಿಗೆದಾರನಿಂದ ಒಂದು ಗಿಡಕ್ಕೆ 75 ರೂ.ಗಳಂತೆ 600 ಗಿಡಗಳನ್ನು ಒಂದು ಎಕರೆ ಪ್ರದೇಶದಲ್ಲಿ ಬೆಳೆದು ಯಶಸ್ವಿಯಾಗಿರುವ ಈ ಕುಟುಂಬ, ಈ ವರ್ಷದಿಂದ ಇನ್ನೂ ಮೂರು ಎಕರೆ ಪ್ರದೇಶದಲ್ಲಿ ಪೇರಲೆ ಬೆಳೆಯಲು ಸಿದ್ಧತೆ ಮಾಡಿಕೊಂಡಿದೆ. ಇವರು ಬೆಳೆದಿರುವ ಪೇರಲ ಹಣ್ಣಿನ ತೂಕ 2 ಕೆಜಿಯಷ್ಟು ಇರುವ ಕಾರಣ ಒಂದು ಹಣ್ಣು 60-70 ರೂ. ಮಾರಾಟವಾಗುತ್ತಿದೆ.
ಮಧುಮೇಹಕ್ಕೆ ರಾಮಬಾಣ:
ಮಧುಮೇಹಿಗಳಿಗೆ ಈ ಪೇರಲೆ ಹಣ್ಣುಗಳು ಅತ್ಯಂತ ಉಪಯುಕ್ತವಾಗಿವೆ. ಸಕ್ಕರೆ ಕಡಿಮೆ ಇರುವ ಈ ಹಣ್ಣು, ಹೆಚ್ಚಿನ ಪೌಷ್ಟಿಕಾಂಶವನ್ನು ಹೊಂದಿದೆ. ದೇಹದ ತೂಕ ಇಳಿಸಲು ಇದು ಹೆಚ್ಚು ಉಪಯುಕ್ತವಾಗಿದ್ದು, ದೇಹಕ್ಕೆ ಬೇಕಾದ ವಿಟಮಿನ್ಗಳನ್ನು ಒದಗಿಸುತ್ತದೆ.
ಪೇರಲ ಹಣ್ಣು ಬೆಳೆಯುವ ಆಸಕ್ತಿ ಇರುವವರು ಇವರನ್ನು ಸಂಪರ್ಕಿಸಬಹುದು:
ಸಿದ್ದು ಶಿಳೀನ್, ಯುವ ರೈತ- ಹಡಗಲಿ
ವಿಜಯಪುರ ತಾಲೂಕು, ವಿಜಯಪುರ ಜಿಲ್ಲೆ
ಮೊ. 8105857838