ವಿಜಯಪುರ: ಸರಿಯಾಗಿ ಕುಡಿಯಲು ನೀರು ಬಿಡದಿದ್ದರೂ ಸಹ ನೀರಿನ ಬಿಲ್ ಕೇಳಲು ಬಂದಿದ್ದಾರೆ ಎಂದು ಅಧಿಕಾರಿಯನ್ನು ಸಾರ್ವಜನಿಕರು ಕೂಡಿ ಹಾಕಿದ ಘಟನೆ ನಗರದ ಗ್ಯಾಂಗಬಾವಡಿಯ ಓಂ ಗಣಪತಿ ಬಡಾವಣೆಯಲ್ಲಿ ನಡೆದಿದೆ.
ನೀರನ್ನು ಕಾಲ ಕಾಲಕ್ಕೆ ಬಿಡದಿದ್ದರೂ ಬಿಲ್ ಕೇಳಲು ಬಂದಿದ್ದಾರೆ ಎಂದು ಅಧಿಕಾರಿ ಎಲ್ಲೂ ಹೋಗದಂತೆ ತಡೆ ಹಿಡಿದಿದ್ದಾರೆ. ನೀರು ಸರಬರಾಜು ಮಂಡಳಿಯ ಎಇಇ ಗುರುದತ್ತ ಬಿಲ್ ಕೇಳಲು ಬಂದಿದ್ದ ಅಧಿಕಾರಿಯಾಗಿದ್ದಾರೆ. ನೀರು ಬರುತ್ತಿಲ್ಲ, ಬಿಲ್ ನಾವೇಕೆ ಕಟ್ಟಬೇಕು ಎಂದು ಅಧಿಕಾರಿಗೆ ಜನರು ತರಾಟೆ ತೆಗೆದುಕೊಂಡರು.
ಮೇಲಾಧಿಕಾರಿಗಳು ಬರೋವರೆಗೂ ಇಲ್ಲೇ ಇರುವಂತೆ ಅಧಿಕಾರಿಗೆ ಜನರು ದಿಗ್ಬಂಧನ ಹಾಕಿದರು. ನೀರು ಸರಿಯಾಗಿ ಬರದಿದ್ದರೂ ಬಿಲ್ ಕೇಳಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಬಿಲ್ ಕಟ್ಟುವುದಿಲ್ಲ ಎಂದು ಗ್ಯಾಂಗ್ ಬಾವಡಿಯ 50ಕ್ಕೂ ಅಧಿಕ ಮಂದಿ ಪಟ್ಟು ಹಿಡಿದರು. ಕಳೆದ 6 ತಿಂಗಳ ಹಿಂದೆ 24X7 ನೀರಿನ ಸಂಪರ್ಕ ನೀಡಲಾಗಿದೆ. ಆದರೆ ಸರಿಯಾಗಿ ನೀರು ಬರುತ್ತಿಲ್ಲ, ಬಂದರೂ ಸಣ್ಣದಾಗಿ ಬರುತ್ತದೆ ಎಂದು ಆರೋಪಿಸಿದರು.
ಅಧಿಕಾರಿಯನ್ನು ದಿಗ್ಬಂಧನಕ್ಕೆ ಒಳಪಡಿಸಿದಾಗಲೇ ಜೋರಾಗಿ ಮಳೆ ಬಂದರೂ ಸಹ ಅಧಿಕಾರಿಯನ್ನು ಕದಲದಂತೆ ಸಾರ್ವಜನಿಕರು ಸುತ್ತುವರೆದಿದ್ದರು. ನಂತರ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.