ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲೇ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ವಿಜಯಪುರದ ಶ್ರೀ ಸಿದ್ದೇಶ್ವರ ದೇವರ ಸಂಕ್ರಮಣ ಜಾತ್ರೆ ಈ ವರ್ಷ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು. ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆ, ನಂತರದ ವರ್ಷ ಚರ್ಮಗಂಟು ರೋಗದ ಹಿನ್ನೆಲೆ ಜಾನುವಾರು ಜಾತ್ರೆಯನ್ನು ರದ್ದು ಮಾಡಲಾಗಿತ್ತು.
ಆದರೆ ಎಲ್ಲ ಅಡೆತಡೆಗಳು ಮುಗಿದ ಹಿನ್ನೆಲೆಯಲ್ಲಿ ಈ ಬಾರಿ ಎಂದಿನಂತೆ ಜಾನುವಾರು ಜಾತ್ರೆಯನ್ನು ಬಹು ನಿರೀಕ್ಷೆಗಳೊಂದಿಗೆ ಆಯೋಜನೆ ಮಾಡಲಾಗಿದೆ. ಆದರೆ ಈ ಬಾರಿ ಜಾನುವಾರು ಜಾತ್ರೆಯಲ್ಲಿ ನೀರೀಕ್ಷಿತ ಮಟ್ಟದಲ್ಲಿ ದನಗಳು ಬರಲು ಸಾಧ್ಯವಾಗಿಲ್ಲ. ಈ ನಡುವೆ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಜಾನುವಾರುಗಳು ಭಾಗಿ ಆಗಿ ಜಾತ್ರಾ ಮಹೋತ್ಸವಕ್ಕೆ ಕಳೆ ತಂದಿರುವುದು ಜಾತ್ರಾ ಆಯೋಜಕರಲ್ಲಿ ಸಮಾಧಾನವನ್ನಂತೂ ತಂದಿದೆ. ಆದರೆ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳ ವ್ಯಾಪಾರ ಮಾತ್ರ ಕುಂಠಿತವಾಗಿರುವುದು ತುಸು ನಿರಾಸೆಗೂ ಕಾರಣವಾಗಿದೆ.
ಈ ಬಾರಿ ಜಾತ್ರೆಯಲ್ಲಿ 50 ರಿಂದ 60 ಸಾವಿರದಷ್ಟು ದನಗಳು ಸೇರುತ್ತವೆ ಎಂಬ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಹಾಗೂ ಸಿದ್ದೇಶ್ವರ ದೇವಸ್ಥಾನ ಕಮಿಟಿಯವರು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದರು. ನಗರದ ಹೊರಭಾಗದ ತೊರವಿ ಬಳಿ ಸುಮಾರು 20 ರಿಂದ 25 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ದನಗಳ ಜಾತ್ರೆ ಆಯೋಜನೆ ಮಾಡಲಾಗಿತ್ತು. ಆದರೆ, ನಿರೀಕ್ಷಿಸಿದಷ್ಟು ಜಾನುವಾರುಗಳು ಜಾತ್ರೆಯಲ್ಲಿ ಭಾಗವಹಿಸಿರಲಿಲ್ಲ. ಇದಕ್ಕೆಲ್ಲ ಕಾರಣ ಬರಗಾಲ ಎನ್ನುತ್ತಾರೆ ಇಲ್ಲಿಗೆ ಬಂದಿರುವ ರೈತರು.
ತೊರವಿ ಗ್ರಾಮದ ಬಳಿ ಮಾರಾಟಕ್ಕಾಗಿ ಕೆಲ ಜಾನುವಾರಗಳು ಜಮಾಯಿಸಿದ್ದು, ಖರೀದಿಸುವ ರೈತರು ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. 1 ಲಕ್ಷಕ್ಕೆ ಮಾರಾಟ ಆಗುವ ಜಾನುವಾರುಗಳನ್ನು 80 ಸಾವಿರಕ್ಕೆ ಕೇಳುತ್ತಿದ್ದಾರೆ. ಬರಗಾಲದಿಂದ ಜಾನುವಾರುಗಳಿಗೆ ಮೇವು ನೀರಿನ ಕೊರತೆಯಾಗುತ್ತಿದ್ದು, ಎತ್ತುಗಳ ಮಾರಾಟಕ್ಕೆ ರೈತರು ಮುಂದಾಗಿದ್ದಾರೆ. ಆದರೆ, ಖರೀದಿಸುವ ರೈತರ ಸಂಖ್ಯೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿಲ್ಲ. ಹೀಗಾಗಿ ಜಾನುವಾರುಗಳ ಮಾರಾಟ ಕಳೆಗುಂದಿದೆ.
ಸರಳವಾಗಿ ಜರುಗಿದ ಸಿಡಿಮದ್ದು ಕಾರ್ಯಕ್ರಮ: ಜಾತ್ರೆಯ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವ ಸಿಡಿಮದ್ದು ಕಾರ್ಯಕ್ರಮವನ್ನು ಈ ಬಾರಿ ಸಾಂಕೇತಿಕವಾಗಿ ಸರಳವಾಗಿ ನಡೆಸಲಾಯಿತು. ಪ್ರತೀ ವರ್ಷ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ, ಈ ಬಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಕಿರುವ ಕಾರಣ ಸಿದ್ದೇಶ್ವರ ದೇವಸ್ಥಾನದ ಬಳಿಯ ಕೋರಿ ಚೌಕ್ನಲ್ಲಿ ನಡೆಯಿತು. ಸಾವಿರಾರು ಜನರು ಸಿಡಿಮದ್ದು ನೋಡಲು ನೆರೆದಿದ್ದು, ಕೋರಿ ಚೌಕ್ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ: ಬಿಳಿಗಿರಿರಂಗನ ಬೆಟ್ಟದಲ್ಲಿ ಚಿಕ್ಕ ಜಾತ್ರೆ: ದ್ವಿಚಕ್ರ ವಾಹನಗಳಿಗೆ ಎರಡು ದಿನ ನಿರ್ಬಂಧ