ವಿಜಯಪುರ: ಜಿಲ್ಲೆಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತ ಎರಡು ಕುಟುಂಬಗಳಿಗೂ ಸಹ ಮಹಾರಾಷ್ಟ್ರದಿಂದಲೇ ಸೋಂಕು ಬಂದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹೌದು, ಕೊರೊನಾ ಸೋಂಕಿತ ಕುಟುಂಬದ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿದೆ. ಮಹಾರಾಷ್ಟ್ರದ ಪೂನಾದಿಂದ ಈ ಸೋಂಕು ಬಂದಿರುವ ಸಾಧ್ಯತೆಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಏಪ್ರಿಲ್ 3ರಂದು ಮಹಾರಾಷ್ಟ್ರದ ಪೂನಾದಿಂದ ಬಂದಿದ್ದ ಮಹಿಳೆ ವಿಜಯಪುರದಲ್ಲಿ ಮೃತಪಟ್ಟಿದ್ದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ತನ್ನ ಎರಡು ಮಕ್ಕಳೊಂದಿಗೆ ಪೂನಾದಿಂದ ಏಪ್ರಿಲ್ 3ರಂದು ವಿಜಯಪುರಕ್ಕೆ ಆಗಮಿಸಿದ್ದರು. ಆ ಮಹಿಳೆಯಿಂದಲೇ ಕೊರೊನಾ ಬಂದಿದೆ ಎಂಬುದು ತನಿಖೆಯ ಪ್ರಾಥಮಿಕ ಹಂತದಲ್ಲಿ ಪತ್ತೆಯಾಗಿದೆ.
ಅಂತ್ಯಕ್ರಿಯೆ ಬಳಿಕ ಮಹಿಳೆ ಹಾಗೂ ಕುಟುಂಬಸ್ಥರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆ ಮಹಿಳೆ ಕುಟುಂಬದಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಏಪ್ರಿಲ್ 12ರಂದೇ ದೃಡಪಟ್ಟಿದೆ. ಅದೇ ಕುಟುಂಬದ ಇನ್ನಷ್ಟು ಜನರ ಗಂಟಲು ದ್ರವದ ಮಾದರಿ ಟೆಸ್ಟ್ಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಈಗಾಗಲೇ ಗಂಟಲು ದ್ರವದ ಮಾದರಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಮತ್ತೊಂದು ಕುಟುಂಬವಾದ ಕೇಸ್ 221ರ 60 ವರ್ಷದ ಮಹಿಳೆಯ ಟ್ರಾವೆಲ್ ಹಿಸ್ಟರಿ ನಿನ್ನೆ ಪತ್ತೆಯಾಗಿದೆ. ಆ ಕುಟುಂಬದವರು ಮಹಾರಾಷ್ಟ್ರದ ಇಚಲಕರಂಜಿಗೆ ಸಂಬಂಧಿಕರ ಅಂತ್ಯಕ್ರಿಯೆಗೆ ಹೋಗಿದ್ದ ವೇಳೆ ಕೊರೊನಾ ಸೋಂಕು ತಗುಲಿರುವುದು ಪ್ರಾಥಮಿಕ ಹಂತದಲ್ಲಿ ಪತ್ತೆಯಾಗಿದೆ. ಆ ಕುಟುಂಬದಲ್ಲಿ ವೃದ್ಧೆ ಹಾಗೂ ಆಕೆಯ ಪತಿಗೆ ಕೊರೊನಾ ದೃಢಪಟ್ಟಿತ್ತು. ವೃದ್ಧೆಯ ಪತಿ ಕೊರೊನಾದಿಂದಲೇ ಮೃತಪಟ್ಟಿದೆ ಎಂದು ಈಗಾಗಲೇ ದೃಡಪಟ್ಟಿದೆ. ಮತ್ತಷ್ಟು ಕೊರೊನಾ ಪಾಸಿಟಿವ್ ಬರಬಹುದು ಎಂಬ ಆತಂಕದಲ್ಲಿದ್ದಾರೆ ವಿಜಯಪುರ ಜನರು.