ವಿಜಯಪುರ : ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವರೇ ಹೆಚ್ಚು. ಇದರ ಮಧ್ಯೆ ವಿಜಯಪುರ ಜಿಲ್ಲಾಸ್ಪತ್ರೆ ಮಾತ್ರ ಮಾದರಿ ಕೆಲಸ ಮಾಡುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವಧಿಗಿಂತ ಮುಂಚೆ ಹಾಗೂ ಕಡಿಮೆ ತೂಕದ ಮಗು ಜನಸಿದರೆ, ಅವರಿಗೆ ಮಾಡುವಂತಹ ರಕ್ಷಣಾ ಕಾರ್ಯ ಈ ಜಿಲ್ಲಾಸ್ಪತ್ರೆಯಲ್ಲಿ ಮಾಡಲಾಗುತ್ತಿದೆ.
ಅವಧಿ ಪೂರ್ವ ಹಾಗೂ ಅತ್ಯಂತ ಕಡಿಮೆ ತೂಕ ಉಳ್ಳ ಶಿಶುಗಳು ಜನಿಸಿದರೆ ಬದುಕುಳಿಯೋದು ತುಂಬಾ ವಿರಳ. ಅಂತಹದ್ದರಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಜನಿಸಿದ ಹೆಣ್ಣು ಮಗುವಿನ ಆಯಸ್ಸು ಗಟ್ಟಿಯಾಗಿದೆ.
ಗ್ರಾಮದ ಬಸಮ್ಮ-ಮಾಂತೇಶ ನಾಯ್ಕೋಡಿ ದಂಪತಿಯ ಮೊದಲ ಮಗು ಜೂನ್ 15ರಂದು ಮನೆಯಲ್ಲೇ ಜನಿಸಿತ್ತು. ಏಳು ತಿಂಗಳಿಗೆ ಜನಿಸಿದ ಈ ಮಗುವಿನ ತೂಕ ಇದ್ದದ್ದು ಕೇವಲ 575 ಗ್ರಾಂ ಮಾತ್ರ. ಅವಧಿಗೂ ಮುನ್ನ ಹಾಗೂ ಒಂದು ಕೆಜಿ ಒಳಗಿನ ತೂಕ ಉಳ್ಳ ಮಕ್ಕಳು ಹೆಚ್ಚಾಗಿ ಬದುಕೋದೇ ಇಲ್ಲವಂತೆ. ಹಾಗಿದ್ದೂ ಸಹ ಮನೆಯಲ್ಲಿ ಹುಟ್ಟಿದ ಈ ಮಗು ಅತ್ಯಂತ ಕಡಿಮೆ ತೂಕ ಹೊಂದಿದ್ದು, ಬದುಕುವ ಸಾಧ್ಯತೆ ಕಡಿಮೆ ಇದ್ದುದರಿಂದ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿನ ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೀಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ SNCU (special newborn care unit) ನಲ್ಲಿ ಕಳೆದ10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಈ ನವಜಾತ ಶಿಶು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಈ ಮೊದಲು ಮುದ್ದೇಬಿಹಾಳ ತಾಲೂಕಿನ ಭಂಟನೂರ ಗ್ರಾಮದ ಸುನಿತಾ-ಸಂತೋಷ ಚಿಮ್ಮಲಗಿ ಎಂಬ ದಂಪತಿಗೂ ಕೇವಲ 800 ಗ್ರಾಂ ತೂಕ ಉಳ್ಳ ಹೆಣ್ಣು ಮಗು ಜನಿಸಿತ್ತು. ಏಪ್ರಿಲ್ 15ರಂದು ಜನಿಸಿದ್ದ ಈ ಮಗುವಿಗೆ ಕಳೆದ ಎರಡು ತಿಂಗಳಿನಿಂದ ಜಿಲ್ಲಾಸ್ಪತ್ರೆಯ ನವಜಾತ ಶಿಶು ಆರೈಕೆ ಕೇಂದ್ರದಲ್ಲೇ ಆರೈಕೆ ಮಾಡುತ್ತಿದ್ದು, ಮಗು ಚೇತರಿಸಿಕೊಂಡಿದೆ. ಇದೀಗ 1ಕೆಜಿ 200 ಗ್ರಾಂ ತೂಕ ಹೊಂದಿ ಆರೋಗ್ಯವಾಗಿದೆ.
ಇದನ್ನು ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ : ನಾದಿನಿ, ಮಗ ಬಂಧನ ಸಾಧ್ಯತೆ!
ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಶರಣಪ್ಪ ಕಟ್ಟಿ, ನವಜಾತು ಶಿಶುಗಳ ತಜ್ಞೆ ಡಾ. ಲಕ್ಷ್ಮಿ ಹಡಲಗಿ ಹಾಗೂ ಶುಶ್ರೂಷಕಿಯರ ಶ್ರಮದಿಂದ ಇಂದು ಅನೇಕ ಬಡ ರೋಗಿಗಳಿಗೆ ಅನುಕೂಲವಾಗಿದೆ. ಜಿಲ್ಲಾಸ್ಪತ್ರೆ ಎಂದರೆ ಮೂಗು ಮೂರಿಯುವವರ ಮಧ್ಯೆ ಇಂತಹ ವಿರಳ ಪ್ರಕರಣಗಳೆರಡನ್ನು ಇಲ್ಲಿನ ವೈದ್ಯರು ಸವಾಲಾಗಿ ಸ್ವೀಕರಿಸಿ ಎರಡು ನವಜಾತ ಹೆಣ್ಣು ಶಿಶುಗಳಿಗೆ ಜೀವದಾತರಾಗಿದ್ದಾರೆ.