ವಿಜಯಪುರ: ವಿವಾಹಿತೆಯೊಬ್ಬಳು ಯುವಕನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಅಮರನಾಥ್ ಸೊಲ್ಲಾಪುರ (25), ಸುನಿತಾ ತಳವಾರ (35) ಹತ್ಯೆಗೀಡಾದವರು. ಈಕೆ ಅಮರನಾಥ್ನೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದಳು ಎಂದು ಹೇಳಲಾಗ್ತಿದೆ.
ಮಂಗಳವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕೊಲೆಯಾದ ಅಮರನಾಥ್ ಸೊಲ್ಲಾಪುರ ಅಲಿಯಾಬಾದ ಗ್ರಾಮದಿಂದ ಸುಮಾರು 1.5 ಕಿ. ಮೀ. ದೂರವಿರುವ ತೋಟಕ್ಕೆ ಬಂದಿದ್ದಾನೆ. ಈ ವೇಳೆ ಇಬ್ಬರು ತೋಟದ ಮನೆಯಲ್ಲಿ ಒಟ್ಟಿಗೆ ಇದ್ದರು. ಆಗ ಸುನಿತಾಳ ತಂದೆ ರಾಮಗೊಂಡ ಮತ್ತು ಸುನಿತಾಳ ಅಪ್ರಾಪ್ತ ಮಗ ಮನೆಗೆ ಬಂದಿದ್ದಾರೆ. ಆಗ ಇವರಿಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವುದನ್ನು ನೋಡಿದ್ದಾರೆ.
ಇದರಿಂದ ಸುನಿತಾ ತಂದೆ ಮತ್ತು ಅಪ್ರಾಪ್ತ ಮಗ ಕೋಪಗೊಂಡಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಕೊಲೆಗೆ ಮಹಿಳೆಯ ತಂಗಿಯ ಗಂಡ ಸಹ ಕೈ ಜೋಡಿಸಿರುವ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬುಧವಾರ ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.