ವಿಜಯಪುರ: ನಗರದ ಬಿಎಲ್ಡಿಇ (ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ) ಡೀಮ್ಡ್ ವಿಶ್ವವಿದ್ಯಾಲಯದ ಚರ್ಮರೋಗ ವಿಭಾಗ ಇಸ್ರೇಲ್ ದೇಶದ ಟೆಲ್ ಅವಿವ್ ಸೌರಾಸ್ಕಿ ಆಸ್ಪತ್ರೆಯೊಂದಿಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದೆ. ಚರ್ಮ ರೋಗ ತಪಾಸಣೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದು ಡಾ.ಅರುಣ ಇನಾಮದಾರ ತಿಳಿಸಿದರು.
ಬಿಎಲ್ಡಿಇ ಡೀಮ್ಡ್ ವಿವಿಯ ಸಮಕುಲಾಧಿಪತಿ ಡಾ.ವೈ.ಎಂ.ಜಯರಾಜ, ಉಪಕುಲಪತಿ ಡಾ.ಆರ್.ಎಸ್.ಮುಧೋಳ, ಡೀನ್ ಡಾ.ಅರವೀಂದ ಪಾಟೀಲ ಮತ್ತು ರಿಜಿಸ್ಟ್ರಾರ್ ಆರ್.ವಿ.ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇತ್ತೀಚಿಗೆ ಅಮೆರಿಕದ ನ್ಯೂ ಅರ್ಲೇಯಾನ್‍ದಲ್ಲಿ ನಡೆದ ಸಮ್ಮೇಳನದಲ್ಲಿ ಬಿಎಲ್ಡಿಇ ಡೀಮ್ಡ್ ವಿವಿಯ ಡಾ.ಅರುಣ ಇನಾಮದಾರ ಹಾಗೂ ಇಸ್ರೇಲ್‍ನ ಡಾ.ಎಲಿ ಸ್ಪೀಚರ್ ಜೊತೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಒಪ್ಪಂದದ ಅನ್ವಯ ಶೈಕ್ಷಣಿಕ ಸಾಮಗ್ರಿ ಮತ್ತು ಮಾಹಿತಿ ವಿನಿಮಯ, ಜಿನೊ ಡರ್ಮೆಟಾಲಜಿ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಪ್ರಕಟಣೆಗೆ ಉಪಯೋಗವಾಗಲಿದೆ. ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ಈ ಅವಧಿಯಲ್ಲಿ ವಿವಿ ಮತ್ತು ಇಸ್ರೇಲ್‍ನ ಸಿಬ್ಬಂದಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪರಸ್ಪರ ವಿನಿಮಯ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಸಂಬಂಧಿಕರಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದರಿಂದ ಆನುವಂಶೀಯ ಚರ್ಮ ರೋಗಗಳ ಪ್ರಮಾಣ ಹೆಚ್ಚಾಗುತ್ತಿದೆ.
ಪ್ರತಿ ತಿಂಗಳು ಸರಾಸರಿ 10 ರೋಗಿಗಳಲ್ಲಿ ಆನುವಂಶೀಕ ಚರ್ಮ ರೋಗಗಳು ಪತ್ತೆಯಾಗುತ್ತಿವೆ. ಈ ಒಡಂಬಡಿಕೆಯಿಂದ ರೋಗ ತಪಾಸಣೆ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಅಧ್ಯಯನ ನಡೆಸಲು ಅನುಕೂಲವಾಗಲಿದೆ. ಅಲ್ಲದೇ, ವಿಶ್ವದ ಅತ್ಯುನ್ನತ ಆನುವಂಶೀಯ ಚರ್ಮರೋಗ ಸಂಶೋಧಕರಲ್ಲಿ ಇಸ್ರೇಲ್‍ನ ಡಾ. ಎಲಿ ಸ್ಪೀಚರ್ ಕೂಡ ಒಬ್ಬರಾಗಿದ್ದಾರೆ. ಇಲ್ಲಿನ ರಕ್ತದ ಮಾದರಿಗಳನ್ನು ಇಸ್ರೇಲ್‍ಗೆ ಕಳುಹಿಸಿ ಜೆನೆಟಿಕ್ ಸಿಕ್ವೇನ್ಸಿಂಗ್ ನಡೆಸಲು ನೆರವಾಗಲಿದೆ. ಅಲ್ಲದೇ, ಮುಂಬರುವ ದಿನಗಳಲ್ಲಿ ಆನುವಂಶಿಕ ಚರ್ಮ ರೋಗಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಡಾ.ಅರುಣ ಇನಾಮದಾರ ತಿಳಿಸಿದ್ದಾರೆ.
ಇದನ್ನು ಓದಿ: ಪದವಿ ಪರೀಕ್ಷೆಗಳಲ್ಲಿ ಬಿಎಲ್ಡಿಇ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಉತ್ತಮ ಸಾಧನೆ