ವಿಜಯಪುರ:ಮತ ಚಲಾಯಿಸಲು ಗುಲಬುರ್ಗಾದಿಂದ ತಡವಾಗಿ ಬಂದಿದ್ದ ದಂಪತಿ ಓಡೋಡಿ ಬಂದು ಮತಚಲಾಯಿಸಿದ ಘಟನೆ ವಿಜಯಪುರ ನಗರದ ದರ್ಬಾರ್ ಹೈಸ್ಕೂಲ್ ಮತದಾನ ಕೇಂದ್ರದಲ್ಲಿ ನಡೆದಿದೆ.
ಗುಲಬುರ್ಗಾ ವಿಂಡ್ ಫ್ಯಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವಿರೇಶ ದಂಪತಿಗೆ ಇಂದು ಬೆಳಗ್ಗೆ ಮೀಟಿಂಗ್ ಇರುವ ಕಾರಣ ಬೇಗ ಬಿಡುವುದು ಆಗಿಲ್ಲ. ನಂತರ ಮತದಾನ ಮಾಡಲೇಬೇಕು ಎಂದು ಗುಲಬುರ್ಗಾದಿಂದ ಬಸ್ ಮೂಲಕ ವಿಜಯಪುರಕ್ಕೆ ಹೊರಟಿದ್ದಾರೆ.
ಆದರೆ ಮಧ್ಯೆ ಟ್ರಾಫಿಕ್ ಜಾಮ್ ಆಗಿದ್ದರಿಂದ ವಿಜಯಪುರ ತಲುಪುವದು ತಡವಾಗಿದೆ. ತಕ್ಷಣ ಬಸ್ ನಿಲ್ದಾಣದಿಂದ ಸ್ನೇಹಿತನೊಬ್ಬನ ಬೈಕ್ ತೆಗೆದುಕೊಂಡು ನೇರ ದರ್ಬಾರ್ ಶಾಲೆಯ ಮತಗಟ್ಟೆ 162ಗೆ ಬಂದು, ನೇರವಾಗಿ ದಂಪತಿ ಓಡೋಡಿ ಹೋಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ದಂಪತಿ ಮತ್ತೆ ಬೈಕ್ ಹತ್ತಿ ಬಸ್ ನಿಲ್ದಾಣಕ್ಕೆ ತೆರಳಿದ್ದಾರೆ.
ನವದಂಪತಿ ಮತದಾನ: ಜಿಲ್ಲೆಯ ತಾಳಿಕೋಟಿ ಪಟ್ಟಣದ ಮತಗಟ್ಟೆ ಸಂಖ್ಯೆ-21ರಲ್ಲಿ ಇಂದು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ ನೂತನ ನವ ವಧು-ವರ ಜೋಡಿ ತಮ್ಮ ಹಕ್ಕು ಚಲಾಯಿಸಿದರು. ಬಿರಾದಾರ ಕುಟುಂಬ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಮದುವೆ ಮುಗಿದ ನಂತರ ವಧು ರಕ್ಷಿತಾ ಅವರು ತಮ್ಮ ಪತಿ ಶರಣಬಸವ ಅವರ ಜತೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಕ್ಯಾಲಿಕಟ್ದಿಂದ ದ್ವಿಚಕ್ರ ವಾಹನದಲ್ಲಿ ಬಂದು ದಂಪತಿ ಹಕ್ಕು ಚಲಾವಣೆ
ದಕ್ಷಿಣಕನ್ನಡ: ವಿಧಾನ ಸಭಾ ಚುನಾವಣೆ ಹಿನ್ನೆಲೆ ಕೇರಳದ ಕ್ಯಾಲಿಕಟ್ ನಿಂದ ಯುವದಂಪತಿ ದ್ವಿಚಕ್ರ ವಾಹನದಲ್ಲೇ ಸುಮಾರು 270 ಕಿ.ಮೀ ಅಂತರದ ಕಡಬಕ್ಕೆ ಬಂದು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯರ್ ಸಮೀಪದ ನಿವಾಸಿ ,ಪ್ರಸ್ತುತ ಕೇರಳದ ಕ್ಯಾಲಿಕಟ್‌ನಲ್ಲಿ ಉದ್ಯೋಗದಲ್ಲಿರುವ ಗೋಪಾಲಕೃಷ್ಣ ಮತ್ತು ಧನ್ಯಾ ಎಂಬ ದಂಪತಿ ದ್ವಿಚಕ್ರ ವಾಹನದಲ್ಲೇ ಬಂದವರು. ಕೋಡಿಂಬಾಳ ಗ್ರಾಮದ ಮಡ್ಯಡ್ಕದ ಬೂತ್ ನಂಬರ್ 95ರಲ್ಲಿ ಅವರು ಮತದಾನ ಮಾಡಿದ್ದಾರೆ.
ಕ್ಯಾಲಿಕೆಟ್‌ನಿಂದ ಮುಂಜಾನೆ:5 ಗಂಟೆಗೆ ಹೊರಟು ಮಧ್ಯಾಹ್ನ 3.35ಕ್ಕೆ ಕೋಡಿಂಬಾಳದ ಮತದಾನದ ಕೇಂದ್ರಕ್ಕೆ ತಲುಪಿ ಮತದಾನ ಮಾಡಿದ ಈ ಯುವದಂಪತಿ ತಮ್ಮ ಊರಿನಲ್ಲೇ ಇದ್ದರೂ ಮತದಾನ ಮಾಡಲು ನಿರ್ಲಕ್ಷ್ಯ ವಹಿಸುವವರಿಗೆ ಮಾದರಿಯಾಗಿದ್ದಾರೆ.
ಇದನ್ನೂಓದಿ:ಸಚಿವ ಕಾರಜೋಳ ಕುಟುಂಬ ಸಮೇತ ಮತದಾನ : ಏಕಕಾಲಕ್ಕೆ ಆಗಮಿಸಿ ಸಚಿವ ನಿರಾಣಿ ಕುಟುಂಬದ 20 ಮಂದಿ ಮತದಾನ