ವಿಜಯಪುರ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆಯಲ್ಲಿದ್ದಾಗ ಆಕಸ್ಮಿಕವಾಗಿ ಗುಂಡು ತಗುಲಿ ವಿಜಯಪುರದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ ಕೆ ಗ್ರಾಮದ ಯೋಧ ದಯಾನಂದ ಮಲ್ಲಿಕಾರ್ಜುನ ಪಾಟೀಲ (28) ಮೃತ ಯೋಧನಾಗಿದ್ದಾನೆ.
ಶ್ರೀನಗರದಲ್ಲಿ ಮಂಗಳವಾರ ಸಂಜೆ ಸೇವಾನಿರತನಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಳೆದ ಐದು ವರ್ಷಗಳ ಹಿಂದೆ ಸಿಎಸ್ಐಎಎಫ್ ಹುದ್ದೆಗೆ ನೇಮಕವಾಗಿದ್ದರು. ಇತ್ತೀಗಷ್ಟೇ ಯೋಧ ದಯಾನಂದ ವಿವಾಹವಾಗಿದ್ದು, ತಂದೆ ಮಲ್ಲಿಕಾರ್ಜುನ ಪಾಟೀಲ ಲಾರಿ ಚಾಲಕರಾಗಿದ್ದರು. ಯೋಧನಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೂ ಓರ್ವ ತಂಗಿ ಇದ್ದಾಳೆ. ತೀರ ಬಡ ಕುಟುಂಬದಿಂದ ಬಂದಿರುವ ದಯಾನಂದ ಅವರು ಸೇನೆ ಸೇರಬೇಕೆಂಬ ಮಹಾದಾಸೆ ಇಟ್ಟುಕೊಂಡಿದ್ದರು. ಅದರಂತೆ ಸೇನೆ ಸೇರಿದ್ದರು.
ಇದೀಗ ಅವರು ಮೃತಪಟ್ಟಿರುವ ಸುದ್ದಿ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಯೋಧ ದಯಾನಂದ ಪಾರ್ಥಿವ ಶರೀರ ತವರಿಗೆ ಕಳುಹಿಸಲಾಗಿದ್ದು, ಇಂದು ಸಂಜೆ ವೇಳೆ ಬೆಳಗಾವಿಗೆ ಆಗಮಿಸಲಿದೆ. ನಂತರ ಅಲ್ಲಿಂದ ಸ್ವಗ್ರಾಮ ಲೋಣಿ ಬಿಕೆ ಗ್ರಾಮಕ್ಕೆ ತಲುಪಲಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಪರಿಚಯಸ್ಥರಿಂದಲೇ ಅವಿವಾಹಿತೆಯ ಕೊಲೆ.. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಫೈನಾನ್ಸ್ರ ಶವ!