ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಸಂಪೂರ್ಣವಾದ ಹಿನ್ನೆಲೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ನೇರ ಸಂವಾದ ಕಾರ್ಯಕ್ರಮದಲ್ಲಿ ವರ್ಷದ ಸಾಧನೆಯ ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಬಿಡುಗಡೆಗೊಳಿಸಿದರು.
ಈ ವೇಳೆ ಶಾಸಕರಾದ ಸೋಮನಗೌಡ ಪಾಟೀಲ, ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು.
ಸಿಎಂ ಯಡಿಯೂರಪ್ಪ ಅವರ ನೇರ ಸಂವಾದದ ವೇಳೆ ವಿಜಯಪುರದ ಗರ್ಭಿಣಿ ಪದ್ಮಶ್ರೀ, ಕೊವಿಡ್ 19 ಸಂದರ್ಭದಲ್ಲಿ ತಮಗೆ ಜಿಲ್ಲಾಡಳಿತ ನೀಡಿದ ಸಹಾಯಹಸ್ತವನ್ನು ಸಿಎಂ ಬಳಿ ಹೆಮ್ಮೆಯಿಂದ ಹೇಳಿಕೊಂಡರು. ಕೊರೊನಾ ಪಾಸಿಟಿವ್ ಆಗಿದ್ದ ನನಗೆ ಹೋಂ ಐಸೋಲೇಷನ್ ಗೆ ಜಿಲ್ಲಾಡಳಿತ ಅವಕಾಶ ನೀಡಿ, ಸೂಕ್ತ ಔಷಧಿ ಹಾಗೂ ಇತರೆ ಸೌಕರ್ಯ ನೀಡಿದ್ದಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಕೊರೊನಾ ಸಮಯದಲ್ಲಿ ಗರ್ಭಿಣಿಯರಿಗೆ ಸಹಾಯ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.