ಮುದ್ದೇಬಿಹಾಳ(ವಿಜಯಪುರ): ಕೊರೊನಾ ವೈರಸ್ ಪತ್ತೆಗಾಗಿ ನಡೆಸುವ ಸ್ವ್ಯಾಬ್ ಟೆಸ್ಟ್ನ ವರದಿ ಬರುವವರೆಗೂ ಆ ವ್ಯಕ್ತಿ ಹೊರಗಡೆ ತಿರುಗಾಡಿದರೆ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸರ್ಕಾರ ಸೂಚಿಸಿದೆ ಎಂದು ಡಾ. ಸಂಗಮೇಶ ದಶವಂತ ಹೇಳಿದರು.
ಪಟ್ಟಣದ ಬಸವ ನಗರದಲ್ಲಿ ಪುರಸಭೆ ಕಾರ್ಯಾಲಯ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೋವಿಡ್ 19 ಕುರಿತು ವಾರ್ಡ್ ಮಟ್ಟದ ಜನ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಬೆಂಗಳೂರು, ಮಹಾರಾಷ್ಟ್ರದಿಂದ ಬಂದವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಆ ವರದಿ ನೆಗೆಟಿವ್ ಇರಲಿ ಪಾಸಿಟಿವ್ ಇರಲಿ. ಆದರೆ, ವರದಿ ಬರುವವರೆಗೂ ಆ ವ್ಯಕ್ತಿ ಹೊರಗಡೆ ಸುತ್ತಾಡುವಂತಿಲ್ಲ ಎಂದು ಎಚ್ಚರಿಸಿದರು.
ನಗರ ಕೋವಿಡ್ 19 ತಂಡದ ಮೇಲ್ವಿಚಾರಕ ಎಂ. ಎಸ್. ಗೌಡರು ಪುರಸಭೆಯ ಕಂದಾಯ ಅಧಿಕಾರಿ ಎಂ. ಬಿ. ಮಾಡಗಿ, ವಿನೋದ್ ಝಿಂಗಾಡೆ, ಪುರಸಭೆ ಸದಸ್ಯ ಆರ್. ಬಿ. ದ್ರಾಕ್ಷಿ, ವಾರ್ಡ್ ಹಿರಿಯರಾದ ಎಂ. ಬಿ. ಸಂಗಮ, ಗಣಪತಿ ಬಡಿಗೇರ, ಆರೋಗ್ಯ ಇಲಾಖೆಯ ಜಯಶ್ರೀ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಕೆಂಭಾವಿ ಪುರಸಭೆ ಸಿಬ್ಬಂದಿ ಹಾಜರಿದ್ದರು.