ವಿಜಯಪುರ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯಿಂದ ಜಲಾವೃತವಾಗಿರುವ ಆಲಮೇಲ ತಾಲೂಕಿನ ತಾರಾಪುರದಲ್ಲಿ ಗ್ರಾಮಸ್ಥರು ಮಾತ್ರವಲ್ಲದೆ ಸಾಕು ಪ್ರಾಣಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ.
ಗ್ರಾಮಸ್ಥರನ್ನು ಪರಿಹಾರ ಕೇಂದ್ರಗಳಿಗೆ ತಂದು ಜಿಲ್ಲಾಡಳಿತ ಅವರಿಗೆ ಆಶ್ರಯ ನೀಡಿದೆ. ಆದರೆ ಮೂಕ ಪ್ರಾಣಿಗಳು ತಿನ್ನಲು ಅನ್ನ ಇಲ್ಲದೆ ಉಪವಾಸದಿಂದ ಗೋಳಾಡುತ್ತಿವೆ. ಮೂಕ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಮರುಗುತ್ತಿರುವ ತಾರಾಪುರ ಗ್ರಾಮಸ್ಥರು ಪರಿಹಾರ ಕೇಂದ್ರದ ಜೋಳದ ಹಿಟ್ಟು ಕಲಿಸಿ ತಾರಾಪುರದ ಪ್ರವಾಹದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.
ಕಳೆದ 5 ದಿನಗಳಿಂದ ಈ ಪ್ರಾಣಿಗಳು ಆಹಾರವಿಲ್ಲದೆ ಕಂಗಾಲಾಗಿದ್ದವು. ಪ್ರವಾಹದಿಂದ ನಡುಗಡ್ಡೆಯಾಗಿದ್ದ ತಾರಾಪುರ ಗ್ರಾಮಸ್ಥರನ್ನು ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದು ತಂದು ಪರಿಹಾರ ಕೇಂದ್ರಕ್ಕೆ ಬಿಡಲಾಗಿತ್ತು. ಗ್ರಾಮಸ್ಥರು ತಮ್ಮ ಮನೆಯ ಸಾಕು ಪ್ರಾಣಿಗಳನ್ನು ಗ್ರಾಮದಲ್ಲಿಯೇ ಬಿಟ್ಟು ಬಂದಿದ್ದಾರೆ. ಗ್ರಾಮದ ಸುತ್ತಮುತ್ತ ನೀರು ಸುತ್ತುವರೆದ ಕಾರಣ ತಾರಾಪುರ ನಡುಗಡ್ಡೆಯಾಗಿದೆ. ಹೀಗಾಗಿ ಪ್ರಾಣಿಗಳು ಆಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿವೆ.
ಕೇವಲ ಪ್ರವಾಹದ ನೀರು ಕುಡಿದು ಬದುಕುತ್ತಿರುವ ಪ್ರಾಣಿಗಳನ್ನು ಗಮನಿಸಿದ ಗ್ರಾಮಸ್ಥರು, ಆಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.