ವಿಜಯಪುರ: ವಿದ್ಯುತ್ ಕೊರತೆ ನೀಗಿಸುವ ಸಲುವಾಗಿ ಉಷ್ಣ ವಿದ್ಯುತ್ ಸ್ಥಾವರಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಜಿಲ್ಲೆಯ ಎನ್ಟಿಪಿಸಿ (ಕೂಡಗಿ ವಿದ್ಯುತ್ ಸ್ಥಾವರ) ಕೂಡ ಒಂದು. ವಿಜಯಪುರದ ಹೆಮ್ಮೆಗೆ ಕಾರಣವಾಗಿದ್ದ ಎನ್ಟಿಪಿಸಿ ಇದೀಗ ರೈತರಿಗೆ ಕಂಟಕವಾಗಿದೆ.
ಎನ್ಟಿಪಿಸಿಯಲ್ಲಿ ನಿತ್ಯ 2,000 ರಿಂದ 2,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ತಗಲುವ ಕಲ್ಲಿದ್ದಲ್ಲನ್ನು ರೈಲು ಮೂಲಕ ತಂದು ಇಲ್ಲಿನ ಸ್ಥಾವರಗಳಲ್ಲಿ ಸುಟ್ಟು ಅದರ ಶಾಖದಿಂದ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕಲ್ಲಿದ್ದಲು ಸುಡುವ ಕಾರಣ ಹಾರುಬೂದಿಯನ್ನು ದೊಡ್ಡ ಸ್ಥಾವರಗಳ ಮೂಲಕ ಗಾಳಿಯಲ್ಲಿ ಬಿಡದೇ, ನೀರಲ್ಲಿ ಮಿಶ್ರಣ ಮಾಡಿ ಸ್ಥಾವರದಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿನ ಮಸೂತಿ ಗ್ರಾಮದ ಬಳಿ 1,400 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿರೋ ನಾಲ್ಕು ಕೆರೆಗಳಿಗೆ ಬಿಡಲಾಗುತ್ತಿದೆ. ಪರಿಣಾಮ ಸುತ್ತಮುತ್ತಲಿನ ಜಮೀನುಗಳು ಸತ್ವ ಕಳೆದುಕೊಳ್ಳುತ್ತಿದ್ದು, ಭೂಮಿ ಬಿಳಿ ಬಣ್ಣಕ್ಕೆ ತಿರುಗುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾರುಬೂದಿಯನ್ನು ನೀರಿನ ಮೂಲಕ ಕೆರೆಗಳಿಗೆ ಬಿಡಲಾಗುತ್ತಿದೆ. ಅಲ್ಲಿ ನೀರನ್ನು ಮತ್ತೆ ಫಿಲ್ಟರ್ ಮಾಡಿ, ಮರು ಬಳಕೆ ಮಾಡಲಾಗುತ್ತದೆ. ಹಾರುಬೂದಿ ಹೂಳಿನ ರೂಪದಲ್ಲಿ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದು, ಇದನ್ನು ಸಿಮೆಂಟ್ ಪ್ಯಾಕ್ಟರಿಗೆ ಹಾಗೂ ಇಟ್ಟಿಗೆ ತಯಾರಿಕೆಗೆ ನೀಡಲಾಗುತ್ತಿದೆ. ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತು ತಂದ ನೀರು ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದು, ಅದೇ ನೀರು ಕೆರೆಗಳ ಕೆಳಗಿನ ಭಾಗದ ರೈತರ ಪಾಲಿಗೆ ವಿಷವಾಗಿ ಪರಿಣಮಿಸಿದೆ.
ಹೌದು, ಯಾವಾಗ ಉಷ್ಣ ವಿದ್ಯುತ್ ಸ್ಥಾವರದ ಹಾರುಬೂದಿಯನ್ನು ಹೊತ್ತ ನೀರು ಮಸೂತಿ ಹಾಗೂ ಸುತ್ತಮುತ್ತಲ ಗ್ರಾಮಗಳ ಬಳಿ ನಿರ್ಮಾಣವಾಗಿರೋ ಕೆರೆಗಳಲ್ಲಿ ಸಂಗ್ರಹವಾಗಲು ಆರಂಭವಾಗಿದೆಯೋ ಅಲ್ಲಿಂದ ಕೆರೆಯ ಸುತ್ತಮುತ್ತಲ ಜಮೀನುಗಳಲ್ಲಿ ಸಮಸ್ಯೆ ಉಂಟಾಗಿತ್ತು. ಹಾರುಬೂದಿಯನ್ನು ಸಂಗ್ರಹಿಸಿದ್ದ ಕೆರೆಗಳ ನೀರು, ಕೆಳಭಾಗದಲ್ಲಿರೋ ಜಮೀನುಗಳಲ್ಲಿ ಮೇಲೇಳಲು ಆರಂಭಿಸಿತು. ಜೊತೆಗೆ ತೆರೆದ ಬಾವಿ, ಕೊಳವೆ ಬಾವಿಗಳ ಅಂತರ್ಜಲದಲ್ಲಿ ಸೇರಿಕೊಂಡಿದ್ದು, ಈ ಭಾಗದಲ್ಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ, ಯಾವುದೇ ಬೆಳೆ ಬೆಳೆಯಲಾಗದೇ ಜವಳು ಹಿಡಿದು ಬಿಟ್ಟಿದೆ.
ಇದೇ ಜಮೀನನ್ನು ನಂಬಿ ಬದುಕುತ್ತಿದ್ದ ರೈತ ಕುಟುಂಬಗಳು ಇದೀಗ ಬೀದಿಗೆ ಬಿದ್ದಿವೆ. ಹಾರುಬೂದಿ ಸಂಗ್ರಹಿಸೋ ಕೆರೆಗಳಿಂದ ನಮಗೆ ಸಮಸ್ಯೆಯಾಗುತ್ತಿದೆ. ನಮ್ಮ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಬೆಳೆ ಬಾರದಂತಾಗಿದೆ ಎಂದು ರೈತರು ಹತ್ತಾರು ಬಾರಿ ಎನ್ಟಿಪಿಸಿ ಆಧಿಕಾರಿಗಳಿಗೆ ಮನವಿ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿ ಜಮೀನಿನ ಮೇಲ್ಭಾಗದಲ್ಲಿ ಉಪ್ಪಿನಾಂಶ ಸಂಗ್ರಹವಾಗುತ್ತಾ ಹೋದ ಕಾರಣ, ಜಮೀನುಗಳು ಸವಳು ಜವಳಾಗಿದೆ.
ಲಕ್ಷಾಂತರ ರೂ. ಹಣ ಖರ್ಚು ಮಾಡಿದರೂ ಫಸಲು ಕುಂಠಿತಗೊಂಡಿದೆ. ಇದರಿಂದ ಬೇಸತ್ತ ರೈತರು ಇಲ್ಲಿನ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರನ್ನು ಪ್ರಯೋಗಾಲಯದಲ್ಲಿ ಈ ಹಿಂದೆಯೇ ಪರೀಕ್ಷೆ ಮಾಡಿಸಿದಾಗ ಇಲ್ಲಿನ ತೆರೆದ ಬಾವಿ ಹಾಗೂ ಕೊಳವೆ ಬಾವಿಯ ನೀರು ಸಹ ಜನ, ಜಾನುವಾರುಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ಯೋಗ್ಯವಿಲ್ಲವೆಂದು ವರದಿ ನೀಡಿದೆ. ಇದು ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ.
ಒಂದೆಡೆ ಜಮೀನು ಹಾಳಾಗಿದೆ, ಮತ್ತೊಂದೆಡೆ ನಮ್ಮ ಭಾಗದ ಅಂತರ್ಜಲವೂ ವಿಷವಾಗುತ್ತಿದೆ ಎಂದು ಈ ಭಾಗದ ರೈತರು ತೀವ್ರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ತಮ್ಮದೇ ಜಮೀನಿನ ಕೊಳವೆ ಬಾವಿಯ ನೀರನ್ನು ಕುಡಿಯುತ್ತಿದ್ದರೂ ಸಹ ಇದೀಗ ಹಾರುಬೂದಿಯ ಕೆರೆಗಳ ನೀರು ಈ ಭಾಗದ ಅಂತರ್ಜಲವನ್ನು ಸೇರಿಕೊಂಡಿರೋ ಕಾರಣ ಇಲ್ಲಿಯ ನೀರಿನ ಸ್ವಾದವೇ ಬದಲಾಗಿದೆ. ಪ್ರಯೋಗಾಲಯದಲ್ಲಿಯೂ ಇಲ್ಲಿಯ ನೀರು ಕುಡಿಯಲು ಯೋಗ್ಯವಿಲ್ಲವೆಂದು ವರದಿ ನೀಡಿದೆ. ಭೂಮಿಯಲ್ಲಿ ಅಧಿಕ ತೇವಾಂಶ ಹೆಚ್ಚಾಗಿ ಯಾವುದೇ ಬೆಳೆ ಬೆಳೆಯಲು ಆಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಮಿಟಿ ರಚನೆ: ಸದ್ಯ ಜಿಲ್ಲಾಡಳಿತ ಈ ಸಮಸ್ಯೆ ಬಗೆಹರಿಸಲು ಮುಂದಾಗಿದೆ. ಖುದ್ದು ಪೀಡಿತ ಜಮೀನುಗಳಿಗೆ ವಿಜಯಪುರ ಉಪ ವಿಭಾಗಾಧಿಕಾರಿ, ಕೊಲ್ಹಾರ ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳ ನೇತೃತ್ವದ ಕಮೀಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಸಮಸ್ಯೆ ಆಲಿಸಿದೆ. ರೈತರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದೆ.
ಈ ವಿಚಾರವಾಗಿ ಮಾತನಾಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್, ಎನ್ಟಿಪಿಸಿ ಸುತ್ತಮುತ್ತಲಿನ ಹಳ್ಳಿಗಳ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಎಕ್ಸ್ಪರ್ಟ್ ಕಮಿಟಿ ಸಭೆ ಮಾಡಿದ್ದೇವೆ, ಅವರ ಮೂಲಕ ಟೆಕ್ನಿಕಲ್ ಪರ್ಸಸನ್ಸ್ ತಂಡ ಸಮಗ್ರ ಅಧ್ಯಯನ ಮಾಡಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಸದ್ಯ ರೈತರಿಗೆ ಆದ ಹಾನಿಯನ್ನು ಭರಿಸಬೇಕೆಂದು ಎನ್ಟಿಪಿಸಿ ಅಧಿಕಾರಿ ಗಳಿಗೆ ಹೇಳಲಾಗಿದೆ. ಇದರ ಜೊತೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಮಸ್ಯೆಗೀಡಾದ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಂಡು ರೈತರಿಗೆ ಸೂಕ್ತ ಪರಿಹಾರ ನೀಡಬೇಕಿದೆ. ನಂತರ ಹಾರುಬೂದಿಯ ನೀರು ಸಂಗ್ರಹವಾಗಿರೋ ಕೆರೆಗಳ ನೀರು ಅಂತರ್ಜಲ, ಜಮೀನುಗಳಿಗೆ ಸೇರದಂತೆ ತಾಂತ್ರಿಕ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.