ವಿಜಯಪುರ: ಬರದನಾಡು ವಿಜಯಪುರ ಜಿಲ್ಲೆಯಲ್ಲಿ ರೈತ ಮನಸ್ಸು ಮಾಡಿದರೆ, ತೋಟಗಾರಿಕೆ ಬೆಳೆಯಲ್ಲಿಯೂ ಸಾಧನೆ ಮಾಡಬಹುದು ಎಂದು ಹಲವು ಸಂದರ್ಭದಲ್ಲಿ ತೋರಿಸಿಕೊಟ್ಟಿದ್ದಾನೆ. ಇದೀಗ ಇದಕ್ಕೆ ತಾಜಾ ನಿದರ್ಶನವಾಗಿದ್ದಾರೆ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಿಂಗಿಹಾಳ ಗ್ರಾಮದ ತುಕಾರಾಮ ಪವಾರ್.
ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ಎರಡು ಎಕರೆಯಲ್ಲಿ ಪೇರಲ ಬೆಳೆದಿದ್ದಾರೆ. ಇನ್ನೂ ಇವರ ಭೂಮಿ ಸಂಪೂರ್ಣವಾಗಿ ಬರಡು ಭೂಮಿಯಾಗಿದೆ. ಗ್ರಾಮ ಪಂಚಾಯಿತಿಯಿಂದ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಬರಡು ಭೂಮಿ ಸ್ವಚ್ಛಗೊಳಿಸಿಕೊಂಡು ಸಣ್ಣ ಹೊಂಡ ತೋಡಿ ಪೇರಲ ಬೆಳೆದಿದ್ದಾರೆ. ಇನ್ನು ತೋಟಗಾರಿಕಾ ಇಲಾಖೆಯಿಂದ ಸದುಪಯೋಗ ಪಡೆದುಕೊಂಡು ಸಸಿಗಳನ್ನು ಹಾಗೂ ಡ್ರಿಪ್ಗೆ ಅನುದಾನ ಪಡೆದು ಸಸಿ ನೆಟ್ಟಿದ್ದಾರೆ. ಒಂದೇ ವರ್ಷದ ಒಳಗೆ ರೈತ ತುಕಾರಾಮ ಪವಾರ್ ಅವರು ಬೆಳೆದ ಪೇರು ಈಗ ಫಲ ನೀಡುತ್ತಿದ್ದು, ಸೀಜನ್ನಲ್ಲಿ ನಿತ್ಯ ಸುಮಾರು 20 ಟ್ರೇನಷ್ಟು ಪೇರು ಮಾರಿದರೆ, ಈಗ ಎರಡು ದಿನಕ್ಕೊಮ್ಮೆ 20 ಟ್ರೇನಷ್ಟು ಪೇರಲವನ್ನು ಮಾರಾಟ ಮಾಡಿ ಉತ್ತಮ ಲಾಭ ಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಏತ ನೀರಾವರಿ ಯೋಜನೆಯ ಪ್ರಯೋಜನ: ಇನ್ನು ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದಾಗಿ ಇಟ್ಟಂಗಿಹಾಳ ಗ್ರಾಮದಲ್ಲಿ ತುಕಾರಾಮ ಪವಾರ್, ಭೀಮಾಬಾಯಿ ರೈತ ದಂಪತಿ ಬಂಪರ್ ಪೇರಲ ಹಣ್ಣು ಬೆಳೆದು ಮಾರಾಟ ಮಾಡಿ ನಿತ್ಯ ಆದಾಯ ಗಳಿಸುತ್ತಿದ್ದಾರೆ. ಮೊದಲು ಒಣ ಬೇಸಾಯದಲ್ಲಿ ಹುರುಳಿ, ಮೂಕಣಿ ಕಾಳು, ಶೇಂಗಾ, ಸಜ್ಜೆ ಮತ್ತು ಜೋಳವನ್ನು ಬೆಳೆಯುತ್ತಿದ್ದರು. ಸಕಾಲಕ್ಕೆ ಮಳೆ ಇಲ್ಲದೇ, ಬೆಳೆದ ಬೆಳೆಗೆ ತಕ್ಕ ಬೆಲೆಯೂ ಸಿಗದೇ ನಷ್ಟ ಅನುಭವಿಸಿದ್ದರು. ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆ ಈ ಭಾಗದಲ್ಲಿ ಸಾಕಾರಗೊಂಡ ಪರಿಣಾಮ ರೈತರ ಆದಾಯ ದ್ವಿಗುಣ ಆಗುತ್ತಿದೆ.
ಸಚಿವ ಎಂ.ಬಿ. ಪಾಟೀಲ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿರುವ ಪರಿಣಾಮ ರೈತರ ಬದುಕು ಹಸನಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೇರಲ ಹಣ್ಣಿಗೆ ಪ್ರತಿ ಕೆ.ಜಿಗೆ 45 ರಿಂದ 50 ರೂ ಬೆಲೆ ಇದೆ. ನಿತ್ಯವೂ ವಿಜಯಪುರ ನಗರದ ವಿವಿಧೆಡೆ ಮಾರಾಟ ಮಾಡುತ್ತಾರೆ. ಹೀಗೆ ಕಳೆದ 5-6 ತಿಂಗಳಿನಿಂದ ಸುಮಾರು 1 ಲಕ್ಷಕ್ಕೂ ಅಧಿಕ ಲಾಭ ಪಡೆದಿದ್ದಾರೆ.
‘‘ಕೈಲಾಗದು ಎಂದು ಕೈ ಕಟ್ಟು ಕುಳಿತರೆ ಸಾಗದು ಕೆಲಸವು ಮುಂದೆ‘‘ ಎಂಬ ಡಾ.ರಾಜಕುಮಾರ ಅವರ ಹಾಡಿನಂತೆ ಬರಡು ಭೂಮಿಯಲ್ಲಿ ಬರೀ ಕಲ್ಲಿದೆ ಎಂದುಕೊಂಡಿದ್ದರೆ, ಇಲ್ಲಿ ಏನೂ ಮಾಡಲು ಆಗುವುದಿಲ್ಲ ಎಂದು ಸುಮ್ಮನೆ ಕುಳಿತಿದ್ದರೆ, ರೈತ ತುಕಾರಾಮ ಕೂಡಾ ಏನೂ ಮಾಡಲಾಗುತ್ತಿರಲಿಲ್ಲ. ಪ್ರಯತ್ನಕ್ಕೆ ಫಲ ಕಟ್ಟಿಟ್ಟ ಬುತ್ತಿ ಎಂಬಂತೆ ಬರಡು ಭೂಮಿಯಲ್ಲಿ ಪೇರು ಬೆಳೆದು ಇತರ ರೈತರಿಗೆ ಮಾದರಿ ಆಗಿರುವ ತುಕಾರಾಮ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ: ಸರ್ಕಾರಿ ನೌಕರಿ ಸಿಗದೇ ಕೃಷಿಯತ್ತ ಮುಖಮಾಡಿದ ಯುವಕ: 30 ಗುಂಟೆಯಲ್ಲಿ ಟೊಮೆಟೊ ಬೆಳೆದು ಲಕ್ಷಾಧೀಶನಾದ ರೈತ