ವಿಜಯಪುರ: ಭಾರತೀಯ ವಾಯುಪಡೆಗೆ ರಫೇಲ್ ಫೈಟರ್ ಜೆಟ್ಗಳು ಸೇರ್ಪಡೆಯಾಗುತ್ತಿವೆ. ಸುಮಾರು ಐದು ರಫೇಲ್ ಜೆಟ್ಗಳು ಹರಿಯಾಣದ ಅಂಬಾಲಾದಲ್ಲಿ ಸೇರ್ಪಡೆಯಾಗಲಿದ್ದು, ಇದರಲ್ಲಿ ಒಂದು ರಫೇಲ್ ಜೆಟ್ಗೆ ಕನ್ನಡನಾಡಿನ ಸ್ಪರ್ಶ ಹೊಂದಿದ್ದವರೊಬ್ಬರು ಸಾರಥಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ಅರುಣಕುಮಾರ್ ಎಂಬುವರು ವಿಂಗ್ ಕಮಾಂಡರ್ ಆಗಿದ್ದು, ರಫೇಲ್ ಜೆಟ್ ವಿಮಾನವೊಂದಕ್ಕೆ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಬಿಹಾರ ಮೂಲದ ಅರುಣಕುಮಾರ್ 1995ರಿಂದ 2001 ಬ್ಯಾಚ್ನಲ್ಲಿ ವಿಜಯಪುರದ ಸೈನಿಕ ಶಾಲೆಯ ವಿದ್ಯಾರ್ಥಿಯಾಗಿದ್ದರು. 5ನೇ ತರಗತಿಯಿಂದ ಪಿಯುಸಿಯವರೆಗಿನ ವಿದ್ಯಾಭ್ಯಾಸವನ್ನು ಇದೇ ಸೈನಿಕ ಶಾಲೆಯಲ್ಲಿ ಮುಗಿಸಿದ್ದಾರೆ. ಪ್ರತಿ ವರ್ಷ ಶಾಲೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗುತ್ತಿದ್ದ ಇವರು ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿಯೂ ಆಸಕ್ತಿ ಹೊಂದಿದ್ದರು.
ಸೈನಿಕ ಶಾಲೆಯಲ್ಲಿ ಪಿಯುಸಿ ಮುಗಿಸಿದ ಮೇಲೆ 2002ರಲ್ಲಿ ಎನ್ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಸೇರಿದ್ದರು. ಅಲ್ಲಿಂದ ಫೈಲಟ್ ಆಗಿ ತರಬೇತಿ ಪಡೆಯುತ್ತಲೇ ಈಗ ರಫೇಲ್ ಯುದ್ಧ ವಿಮಾನದ ವಿಂಗ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವೆಂದು ಸೈನಿಕ ಶಾಲೆಯ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.