ವಿಜಯಪುರ: ಜಿಲ್ಲೆಗೆ ಆಗಮಿಸುತ್ತಿರುವ ವಿದೇಶಿಗರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ತಜ್ಞ ವೈದ್ಯರ ಮೂಲಕ ಸೂಕ್ತ ಆರೋಗ್ಯ ತಪಾಸಣೆ ಸಹ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಕೋವಿಡ್ 19 ಮುನ್ನೆಚ್ಚರಿಕೆ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಗೆ ಈವರೆಗೆ 150 ವಿದೇಶಿಗರು ಮರಳಿದ್ದಾರೆ. ಈ ಪೈಕಿ ಈಗಾಗಲೇ ನಾಲ್ವರು ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇನ್ನೊಬ್ಬರ ಪರೀಕ್ಷಾ ವರದಿ ಶೀಘ್ರದಲ್ಲಿ ಬರುವ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಗೆ ಆಗಮಿಸುತ್ತಿರುವ ಮತ್ತು ಮರಳಿರುವ ಪ್ರತಿಯೊಬ್ಬ ವಿದೇಶಿಗರ ಬಗ್ಗೆ ತೀವ್ರ ನಿಗಾ ಇಡಲಾಗಿದ್ದು, ಸೂಕ್ತ ತಪಾಸಣೆ ಸಹ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತದ ಮನವಿ ಮತ್ತು ವಿವಿಧ ಮಾಧ್ಯಮಗಳ ಮೂಲಕ ತೀವ್ರ ಜಾಗೃತಿಯಿಂದಾಗಿ ಸಾರ್ವಜನಿಕರೇ ವಿದೇಶಿಗರು ಬರುತ್ತಿರುವ ಬಗ್ಗೆ ಮಾಹಿತಿ ಒದಗಿಸುತ್ತಿರುವುದು ಸಂತಸದ ವಿಷಯವಾಗಿದೆ. ವಿಶ್ವ ವ್ಯಾಪಿ ತಲ್ಲಣಗೊಳಿಸಿರುವ ಈ ಖಾಯಿಲೆಯ ವಿಸ್ತಾರದಿಂದ ನಲುಗಿರುವ 10 ದೇಶಗಳ ಜನರು ಜಿಲ್ಲೆಗೆ ಬರುತ್ತಿರುವುದರಿಂದ ಅವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.