ವಿಜಯಪುರ: ನಗರದ ಪ್ರತಿಷ್ಠಿತ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿ ಹಾಗೂ ನಗರದ ಹೆಸರಾಂತ ವೈದ್ಯ ಡಾ.ಎಂ.ಎಸ್.ಬಿರಾದಾರ(65) ಇಂದು ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊರೊನಾ ರೋಗಿಗಳ ಸೇವೆ ಮಾಡುತ್ತಲೇ ಕೊರೊನಾ ಸೋಂಕಿಗೆ ತುತ್ತಾಗಿದ್ದ ಅವರು ಹೋಂ ಕ್ವಾರೆಂಟೈನ್ ಆಗಿ ಗುಣಮುಖರಾಗಿದ್ದರು. ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಬಿಎಲ್ಡಿಇ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನಿನ್ನೆ ಸೋಲ್ಲಾಪುರದಿಂದ ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು. ಆಸ್ಪತ್ರೆಗೆ ದಾಖಲಾಗುವ ಮುನ್ನವೆ ಮಾರ್ಗ ಮಧ್ಯೆ ಮತ್ತೊಮ್ಮೆ ತೀವ್ರ ಹೃದಯಾಘಾತಕ್ಕೆ ಒಳಗಾದ ಇವರಿಗೆ ವೈದ್ಯರು ಹೆಚ್ಚಿನ ಚಿಕಿತ್ಸೆ ಮುಂದುವರೆಸಿದ್ದರೂ ಅದು ಫಲಕಾರಿಯಾಗದೇ ನಿಧನರಾಗಿದ್ದಾರೆ.
ಡಾ.ಮಲ್ಲನಗೌಡ ಶಿವನಗೌಡ ಬಿರಾದಾರ ಮೂಲತಃ ಬಸವ ನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಗ್ರಾಮೀಣ ರೈತ ಕುಟುಂಬದಿಂದ ಬಂದ ಇವರು ಉಕ್ಕಲಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಬಿ.ಎಲ್.ಡಿ.ಇ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ನಂತರ ವಿಜಯಪುರದ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯು ವ್ಯಾಸಂಗ ಮಾಡಿ, ಸರ್ಕಾರಿ ಕೋಟಾದಲ್ಲಿ ಹುಬ್ಬಳಿಯ ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂ.ಬಿ.ಬಿ.ಎಸ್ ಪದವಿಯನ್ನು ಪೂರ್ಣಗೊಳಿಸಿದರು.
ನಂತರ ಬಳ್ಳಾರಿಯಲ್ಲಿ ಎಂ.ಡಿ ಪದವಿ ಗಳಿಸಿ, ಅದೇ ಜಿಲ್ಲೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು. 1984ರಿಂದ 1991ರವರೆಗೆ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾ, ಈ ಭಾಗದಲ್ಲಿ ಹೆಚ್ಚು ಜನಪ್ರೀಯರಾಗಿದ್ದರು.
1991ರಿಂದ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಅವರು ಸುಧೀರ್ಘ 30 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕಾಲೇಜನಲ್ಲಿ 7 ವರ್ಷಗಳ ಕಾಲ ಉಪಪ್ರಾಚಾರ್ಯರಾಗಿ, 4 ವರ್ಷಗಳ ಕಾಲ ಪ್ರಾಚಾರ್ಯರಾಗಿ ನಂತರ 2016ರಿಂದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಅವಧಿ, ಬರುವ ಆಗಸ್ಟ್ 31ಕ್ಕೆ ಮುಕ್ತಾಯ ಗೊಳ್ಳುತ್ತಿತ್ತು. ಮೃತರಿಗೆ ಪತ್ನಿ ಗೋದಾವರಿ, ಪುತ್ರಿ ಡಾ.ಅರುಣಾ ಹಾಗೂ ಅಶ್ವಿನಿ ಇದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ 8 ಗಂಟೆ ಸ್ವಗ್ರಾಮ ಉಕ್ಕಲಿಯ ತೋಟದಲ್ಲಿ ಜರುಗಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಾಜಿ ಸಚಿವ, ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.