ವಿಜಯಪುರ : ತಾಳಿಕೋಟೆ ಪ್ರವೇಶಿಸುವ ಡೋಣಿ ನದಿಯ ಮೇಲಿನ ದಶಕಗಳಷ್ಟು ಹಳೆಯದಾದ ಸೇತುವೆ 15 ಮೀಟರ್ ನಷ್ಟು ಭಾಗ ಕುಸಿಯಲು ತೊಡಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಮೇಲೆ ಸಂಚಾರವನ್ನು ಇಂದಿನಿಂದ ಬಂದ್ ಮಾಡಲಾಗಿದೆ.
ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಿದ್ದರಿಂದ ಮುದ್ದೇಬಿಹಾಳ, ಹೂವಿನ ಹಿಪ್ಪರಗಿ ಮತ್ತು ಮಿಣಜಗಿ ಭಾಗದಿಂದ ತಾಳಿಕೋಟೆ ಪ್ರವೇಶ ಬಂದ್ ಆಗಿದೆ. ಸ್ಥಳಕ್ಕೆ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಮತ್ತು ವಿಜಯಪುರ, ಬೆಳಗಾವಿ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ್ದು, ನಾಳೆ ಬೆಂಗಳೂರು ಪಿಡಬ್ಲ್ಯೂಡಿ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ.
ಮುದ್ದೇಬಿಹಾಳ ಸಿಪಿಐ ಆನಂದ ವಾಘ್ಮೋಡೆ ನೇತೃತ್ವದಲ್ಲಿ ತಾಳಿಕೋಟೆ ಪೊಲೀಸರು ಸೇತುವೆ ಬಳಿ ಪಿಡಬ್ಲ್ಯೂಡಿ ಅಧಿಕಾರಿಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಪ್ರಯಾಣಿಕರನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸೇತುವೆ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಇದೀಗ ಬಂದ್ ಆಗಿರುವುದರಿಂದ ವಾಹನ ಸವಾರರು ಪರದಾಟ ನಡೆಸಿದರು.
ಶಾಸಕ ನಡಹಳ್ಳಿ ಸೇತುವೆ ಪರಿಸ್ಥಿತಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸಾರ್ವಜನಿಕರ ಜೀವ ರಕ್ಷಣೆ ಮಹತ್ವದಾಗಿರುವುದರಿಂದ ಸೇತುವೆ ಮೇಲಿನ ಸಂಚಾರವನ್ನು ತಕ್ಷಣದಿಂದಲೇ ನಿರ್ಬಂಧಿಸಲು ಕ್ರಮ ಕೈಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮತ್ತು ಸೇತುವೆ ದುರಸ್ತಿಗೆ ಶಾಶ್ವತ ಕ್ರಮ ಕೈಕೊಳ್ಳುವಂತೆ ತಿಳಿಸಿದ್ದೇನೆ ಎಂದರು.
ಇದನ್ನೂ ಓದಿ: ಕುಸಿದ ಕಟ್ಟಡದ ಪ್ರದೇಶ ಸಂಪೂರ್ಣ ಪಾಲಿಕೆ ವಶಕ್ಕೆ.. ಸಮರೋಪಾದಿಯಲ್ಲಿ ತೆರವು ಕಾರ್ಯಾಚರಣೆ..