ವಿಜಯಪುರ : ದೇಶದಲ್ಲಿ ಹತ್ತು ಹಲವು ಸಮುದಾಯಗಳಿವೆ. ಒಬ್ಬೊಬ್ಬರದ್ದು ಒಂದೊಂದು ರೀತಿ ಸಂಪ್ರದಾಯ ಇರುತ್ತದೆ. ಅದರಲ್ಲಿಯೂ ಲಂಬಾಣಿ ಸಮುದಾಯದಲ್ಲಿ ವಿಶಿಷ್ಠ ಆಚರಣೆ ನೋಡಲು ಹೆಚ್ಚು. ಮದುವೆ ಸಂಪ್ರದಾಯವಂತೂ ವಿನೂತನವಾಗಿರುತ್ತವೆ. ಗಂಡು-ಹೆಣ್ಣಿನ ಮಾತುಕತೆ ನಡೆಯುವುದೇ ಉದ್ಯಾನವನ, ಇಲ್ಲವೇ ಖಾಲಿ ಕಟ್ಟಡಗಳಲ್ಲಿ ಎನ್ನುವುದು ಒಂದು ವಿಶೇಷ.
ಹೆಚ್ಚಾಗಿ ಲಂಬಾಣಿ (ಬಂಜಾರ್) ಸಮುದಾಯವನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಅವರ ಆಚರಣೆ ನೋಡುವುದೇ ಒಂದು ಅಪರೂಪ. ದುಡಿಯಲು ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಗೆ ಗುಳೆ ಹೋಗುವ ಇವರು, ಮಳೆಗಾಲದಲ್ಲಿ ಕೆಲಸ ಕಡಿಮೆ ಇರುವ ವೇಳೆ ತಮ್ಮ ತಾಂಡಾಗಳಿಗೆ ಮರಳುತ್ತಾರೆ. ಈ ವೇಳೆ ಎಲ್ಲರೂ ಸೇರಿ ಮದುವೆ ಸಮಾರಂಭ, ಮಕ್ಕಳಿಗೆ ಹೆಸರಿಡುವ ಆಚರಣೆ ಮಾಡುತ್ತಾರೆ. ಮದುವೆ ಸಮಾರಂಭ ನಡೆಯುವುದು ಸಹ ವಿಶಿಷ್ಠವಾಗಿರುತ್ತದೆ.
ಗಂಡು-ಹೆಣ್ಣು ನಿಶ್ಚಯವಾದ ಮೇಲೆ ಗಂಡು-ಹೆಣ್ಣಿನ ಕಡೆಯವರು ಪಟ್ಟಣ ಪ್ರದೇಶಗಳಿಗೆ ತೆರಳಿ ಉದ್ಯಾನವನ, ಹಳೆ ಕಟ್ಟಡ, ನಿರ್ಮಾಣ ಹಂತದ ಕಟ್ಟಡ ಇಲ್ಲವೇ ಹೊಲ ಅಥವಾ ಗಿಡದ ನೆರಳಿನಲ್ಲಿ ಕುಳಿತು ಮಾತನಾಡುತ್ತಾರೆ. ಹೆಣ್ಣಿನವರು ಮದುವೆಯಲ್ಲಿ ಗಂಡಿಗೆ ಕೊಡುವ ವರೋಪಚಾರ, ಬಟ್ಟೆ, ಬಂಗಾರ ಕುರಿತು ಮಾತುಕತೆ ನಡೆಸುತ್ತಾರೆ.
ನಂತರ ಮದುವೆಯಲ್ಲಿ ಹೆಣ್ಣಿನ ಮೈಮೇಲೆ ಎಷ್ಟು ಬಂಗಾರ, ಸೀರೆ ಇತ್ಯಾದಿ ಹಾಕಬೇಕು ಅನ್ನೋ ಕುರಿತು ಮಾತುಕತೆ ನಡೆಸಿ, ಮದುವೆ ಮಾತುಕತೆ ಮುಗಿದ ಮೇಲೆ ಎಲ್ಲರೂ ಊಟ ಮಾಡಿ ಮದುವೆ ಸಂತೆ ನಡೆಸುತ್ತಾರೆ. ಇದು ಅನಾದಿ ಕಾಲದಿಂದಲೂ ಬಂದ ಸಂಪ್ರದಾಯ ಎನ್ನುತ್ತಾರೆ ಹಿರಿಯರು.
ನಗರದ ಆನಂದ ಮಹಲ್ನಲ್ಲಿ ಎರಡು ಬಂಜಾರ ಸಮುದಾಯದ ಕುಟುಂಬಗಳ ಮಧ್ಯೆ ನಡೆದ ಮದುವೆ ಮಾತುಕತೆಯಲ್ಲಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಂಡಾದ ವರ ಹಾಗೂ ವಿಜಯಪುರ ಜಿಲ್ಲೆಯ ಉತ್ನಾಳ ತಾಂಡಾದ ವಧು ಕುಟುಂಸ್ಥರು ಮದುವೆ ಸಂಪ್ರದಾಯವನ್ನು ಚಾಚು ತಪ್ಪದೇ ಪಾಲಿಸಿದರು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಹಿಳೆಯರು ಒಂದು ಕಡೆ ಕುಳಿತರೇ, ಪುರುಷರು ಬೇರೆ ಕಡೆ ಕುಳಿತು ಮಾತುಕತೆ ನಡೆಸಿದರು. ಒಳ ಸಂಬಂಧವಿರುವ ಕಾರಣ ವರೋಪಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಲಿಲ್ಲ.
ಲಂಬಾಣಿ ಸಮುದಾಯದಲ್ಲಿ ಈ ರೀತಿಯ ಹತ್ತು ಹಲವು ವಿಶಿಷ್ಠ ಸಂಪ್ರದಾಯಗಳು ಇನ್ನೂ ಜೀವಂತವಾಗಿವೆ. ಸಂತೋಷವಾಗಲಿ, ದುಃಖದ ಸಂದರ್ಭವಾಗಲಿ ತಮ್ಮ ಸಮುದಾಯದ ಜತೆ ಎಲ್ಲರೂ ಇರುವ ಮೂಲಕ ಒಗ್ಗಟ್ಟು ಪ್ರದರ್ಶಿಸುತ್ತಾರೆ. ಇಲ್ಲಿ ಬೇರೆ ಸಮುದಾಯಕ್ಕೆ ತಮ್ಮ ಸಂಪ್ರದಾಯದ ಆಚರಣೆಗೆ ಕರೆಯದಿರುವುದು ಇನ್ನೊಂದು ವೈಶಿಷ್ಟ್ಯ.