ವಿಜಯಪುರ: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ವಿಜಯಪುರ ನಗರದ ಹೊರವಲಯದ ಜುಮನಾಳ ಬಳಿ ನಡೆದಿದೆ. ಕಾರು ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಜರುಗಿದೆ. ಘಟನೆಯಲ್ಲಿ ಕೇಂದ್ರ ಸಚಿವರು ಹಾಗೂ ಕಾರಿನ ಚಾಲಕನಿಗೆ ಸಣ್ಣ - ಪುಟ್ಟ ಗಾಯಗಳಾಗಿದ್ದು, ಈಗಾಗಲೇ ಸಾಧ್ವಿ ನಿರಂಜನಾ ಜ್ಯೋತಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ತೆರಳಿದ್ದಾರೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ರಾಜ್ಯ ಖಾತೆ ಸಚಿವರಾದ ಸಾಧ್ವಿ ನಿರಂಜನಾ ಜ್ಯೋತಿ ಇಂದು ವಿಜಯಪುರ ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಸಂಜೆ ಎಪಿಎಂಸಿಯಲ್ಲಿ ಮೀನುಗಾರರ ಜೊತೆಗೆ ನಡೆಯಬೇಕಾಗಿದ್ದ ಸಂವಾದ ರದ್ದುಗೊಳಿಸಿ ಬಳಿಕ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ದರು.
ಇದನ್ನೂ ಓದಿ: ದೇಶದಲ್ಲಿ ಕಾಂಗ್ರೆಸಿಗರು ವಿನಾಶದ ಕೆಲಸ ಮಾಡುತ್ತಿದ್ದಾರೆ: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್
ಈ ಸಂದರ್ಭದಲ್ಲಿ ಜುಮನಾಳ ಗ್ರಾಮದ ಬಳಿಯ ವಿಜಯಪುರ - ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಚಿವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆಯಲ್ಲಿ ಸಚಿವರ ಪ್ರಯಾಣಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಹಾನಿಯಾಗಿದೆ. ಮತ್ತೊಂದೆಡೆ ಕ್ಯಾಂಟರ್ ಪಲ್ಟಿ ಹೊಡೆದಿದೆ. ಅಪಘಾತದ ನಂತರ ಟ್ರಾಫಿಕ್ ಜಾಮ್ ಆಗಿತ್ತು.
ಈ ವಿಷಯ ತಿಳಿದ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರು ಸೇರಿ ಯಾರಿಗೂ ಗಂಭೀರ ಗಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಪೊಲೀಸರು ಹರಸಾಹಸ ಪಟ್ಟು ವಾಹನ ಸಂಚಾರ ಸುಗಮಗೊಳಿಸಿದರು. ಸ್ಥಳೀಯ ಆಸ್ಪತ್ರೆಯಲ್ಲಿ ಸಾಧ್ವಿ ನಿರಂಜನಾ ಜ್ಯೋತಿ ತಪಾಸಣೆ ಮಾಡಿಸಿಕೊಂಡು ಮುಂದೆ ಪ್ರಯಾಣಿಸಿದ್ದಾರೆ.
ಸಚಿವರ ಕಾಲಿಗೆ ಪೆಟ್ಟು: ಕಾರು ಅಪಘಾತದ ನಂತರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಜಿಲ್ಲಾಸ್ಪತ್ರೆಗೆ ಆಗಮಿಸಿದರು. ಈ ವೇಳೆ ಅವರ ಬಲಗಾಲಿಗೆ ಪೆಟ್ಟಾಗಿರುವುದು ಪತ್ತೆಯಾಗಿದೆ. ಮತ್ತೊಂದೆಡೆ, ಚಾಲಕನ ತಲೆಗೆ ಗಾಯವಾಗಿದ್ದು, ಸಿಟಿ ಸ್ಕ್ಯಾನಿಂಗ್ ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ ಇದ್ದರು.
ಗಾಬರಿ ಪಡಬೇಡಿ, ಏನೂ ಆಗಿಲ್ಲ ಎಂದ ಸಾಧ್ವಿ: ಈ ರಸ್ತೆ ಅಪಘಾತದ ಬಗ್ಗೆ ಖುದ್ದು ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ. ಸಣ್ಣ ಪೆಟ್ಟಾಗಿದೆ. ಯಾರೂ ಗಾಬರಿ ಪಡಬಾರದು ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ನಮ್ಮ ಮೇಲೆ ದೇವರ ದೊಡ್ಡ ಕೃಪೆ ಇತ್ತು. ನಮ್ಮ ಕಾರಿನ ಚಾಲಕ ನೋಡಿಕೊಂಡು ಚಲಾಯಿಸಿದ್ದರು. ಟ್ರಕ್ನ ಕಳೆಗಡೆ ಹೋಗುವುದರಿಂದ ನಾನು ತಪ್ಪಿಸಿಕೊಂಡೆವು. ಚಾಲಕ ಸೇರಿ ಎಲ್ಲರೂ ಸುರಕ್ಷಿತವಾಗಿದ್ದೇವೆ. ಯಾವುದೇ ತೊಂದರೆ ಇಲ್ಲ. ಫ್ಯಾಕ್ಚರ್ ಏನಾಗಿಲ್ಲ. ವೈದ್ಯರು ಎಕ್ಸ್ರೇ ಎಲ್ಲ ತೆಗೆದು ತಪಾಸಣೆ ಮಾಡಿದ್ದು, ಸಮಸ್ಯೆ ಇಲ್ಲ ಎಂದಿದ್ದಾರೆ ಎಂದು ಸಾಧ್ವಿ ನಿರಂಜನ್ ಜ್ಯೋತಿ ಸ್ಪಷ್ಪನೆ ನೀಡಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ತಕ್ಷಣ ದೇಶದ ಜನರ ಕ್ಷಮೆಯಾಚಿಸಬೇಕು: ಸಾಧ್ವಿ ನಿರಂಜನ ಜ್ಯೋತಿ