ವಿಜಯಪುರ: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವುದು ಬೇಡ ಎಂದು ರಾಹುಲ್ ಗಾಂಧಿ ತಿಳಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ರಾಹುಲ್ ಗಾಂಧಿ ಅನುಭವದಿಂದಲೇ ಸಲಹೆ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಲಿನ ಅನುಭವದಿಂದ ರಾಹುಲ್ ಈ ಸಲಹೆ ಕೊಟ್ಟಿರಬಹುದು. ಅಮೇಥಿಯಲ್ಲಿ ರಾಹುಲ್ ಗಾಂಧಿ ತಲೆತಲಾಂತರದಿಂದ ಸ್ಪರ್ಧಿಸಿ ಸೋತು ಹೋಗಿದ್ದಾರೆ. ಅದಕ್ಕಾಗಿ ತಮ್ಮ ಅನುಭವವನ್ನು ಸಿದ್ದರಾಮಯ್ಯ ಮೇಲೆ ಹೇರುತ್ತಿದ್ದಾರೆ. ಬಹುಶಃ ಈ ಅನುಭವದಿಂದ ಅವರು ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ರಾಹುಲ್ ಗಾಂಧಿ ಸಲಹೆ ಬಗ್ಗೆ ವಿಚಾರ ಮಾಡಬೇಕು ಎಂದು ಪ್ರಹ್ಲಾದ್ ಜೋಶಿ ನಕ್ಕು ಸಮ್ಮನಾದರು.
ದೇಶದ ಮರ್ಯಾದೆ ತೆಗೆದ ರಾಹುಲ್ ಗಾಂಧಿ: ಅಮೆರಿಕ ಹಾಗೂ ಯುರೋಪಿಯನ್ ಯೂನಿಯನ್ ಭಾರತದ ಮಧ್ಯೆ ಪ್ರವೇಶ ಮಾಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದು, ಈ ಮೂಲಕ ಅವರು ದೇಶದ ಮರ್ಯಾದೆ ತೆಗೆದಿದ್ದಾರೆ. ಪ್ರಜಾಸತ್ತಾತ್ಮಕವಾದ ಸ್ವತಂತ್ರ ಗಣರಾಜ್ಯ ಹೊಂದಿರುವ ದೇಶ ನಮ್ಮದು. 35 ವರ್ಷದ ಬಳಿಕ ಪೂರ್ಣ ಪ್ರಮಾಣದ ಬಹುಮತ ಬಂದಿದ್ದರೆ ಅದು ಬಿಜೆಪಿಗೆ ಮಾತ್ರ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಹುಮತ ಬಂದಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಮೋದಿ ಎಲೆಕ್ಟೆಡ್ ಲೀಡರ್: ಭಾರತದ ಮೇಲೆ ಎರಗಿ ಬರುವಂತೆ ಅಪಘಾನಿಸ್ತಾನಕ್ಕೆ ಟಿಪ್ಪು ಆಹ್ವಾನ ಕೊಟ್ಟು ಪತ್ರ ಬರೆದಿದ್ದ ಎಂದ ಅವರು, ಮೋದಿ ಎಲೆಕ್ಟೆಡ್ ಲೀಡರ್. ಇವರಂತೆ ಸೆಲೆಕ್ಟೆಡ್ ಲೀಡರ್ ಅಲ್ಲ. ಸೆಲೆಕ್ಟೆಡ್ ಲೀಡರ್ ಆಗಿರುವ ಅವರು ಜನ ಆಯ್ಕೆ ಮಾಡಿದ ಎಲೆಕ್ಟೆಡ್ ಲೀಡರ್ ಬಗ್ಗೆ ಮಾತನಾಡ್ತಿದ್ದಾರೆ, ನೀವೇ ವಿಚಾರ ಮಾಡಬೇಕು. ಕಾಂಗ್ರೆಸ್ ಪಕ್ಷವನ್ನು ದೇಶದಲ್ಲಿ ತಿರಸ್ಕಾರ ಮಾಡಲಾಗುತ್ತಿದೆ. ಕಾಂಗ್ರೆಸ್‌ಗೆ ಈಶಾನ್ಯ ಭಾರತದಲ್ಲಿ ಒಂದೇ ಒಂದು ಎಂಪಿ ಸ್ಥಾನವಿಲ್ಲ. ಎಲ್ಲಾ ಕಡೆಗೂ ಸೋತು ಸುಣ್ಣವಾಗಿದೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಪಿಎಫ್ಐ, ಎಸ್ಡಿಪಿಐ ಜೊತೆ ಕಾಂಗ್ರೆಸ್ ಒಳ ಒಪ್ಪಂದ - ಜೋಶಿ : ಕಾಂಗ್ರೆಸ್ ಒಳ ಒಪ್ಪಂದದ ರಾಜಕಾರಣದಲ್ಲಿ ತೊಡಗಿದೆ. ಎಸ್ಡಿಪಿಐ ಹಾಗೂ ಪಿಎಫ್ಐ ಜೊತೆಗಿನ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದು ಖಂಡನೀಯ. ಸೋಲಿನ ಭಯದಿಂದ ಕಾಂಗ್ರೆಸ್ ಕೆಟ್ಟ ಶಕ್ತಿಗಳ ಜೊತೆಗೆ ಒಳಒಪ್ಪಂದ ಮಾಡಿಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲೇ ಬೇಕು ಎನ್ನುವ ಉದ್ದೇಶದಿಂದ ಈ ರೀತಿ ಮಾಡುತ್ತದೆ. ಅದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ತಪ್ಪಿದ ಭಾರೀ ಅನಾಹುತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅನಾಹುತಯೊಂದು ತಪ್ಪಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಸುತ್ತಲೂ ಹಾಕಿದ್ದ ಎಲ್ಲಾ ಬ್ಯಾರಿಕೇಡ್ಗಳನ್ನು ಧರೆಗುರುಳಿದಿವೆ. ವಿಜಯಪುರ ನಗರದ ಸೈನಿಕ ಶಾಲೆ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ. ಲ್ಯಾಂಡ್ ಆಗುತ್ತಿದ್ದ ಹೆಲಿಕಾಪ್ಟರ್ ವೇಳೆ, ಗಾಳಿಯ ಒತ್ತಡದಿಂದ ಪೊಲೀಸ್ ಇಲಾಖೆಯಿಂದ ಹಾಕಲಾಗಿದ್ದ ಎಲ್ಲಾ ಬ್ಯಾರಿಕೇಡ್ಗಳು ಕೆಳಗೆ ಉರುಳಿ ಬಿದ್ದಿವೆ.
ದೇಶದಲ್ಲಿ ಭಯೋತ್ಪಾದನೆ ತಡೆ: ದೇಶದಲ್ಲಿ ಭಯೋತ್ಪಾದನೆಯನ್ನು ಬಂದ್ ಮಾಡಿದ್ದು, ನರೇಂದ್ರ ಮೋದಿ ನೇತ್ರತ್ವದ ಭಾರತ ಸರ್ಕಾರ, ಪಾಕಿಸ್ತಾನಕ್ಕೆ ಬುದ್ದಿ ಕಲಿಸಿದ್ದು ಮೋದಿ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೋದಿ ಆಡಳಿತವನ್ನು ಶ್ಲಾಘಿಸಿದರು.
ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಕನಿಷ್ಠ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮತ್ತೆ ಬಿಜೆಪಿ ಸರ್ಕಾರ ರಚನೆ: ಬಿ ಎಸ್ ಯಡಿಯೂರಪ್ಪ