ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಸಮೀಪದ ಬೈರವಾಡಿ ಕ್ರಾಸ್ ಬಳಿ ಭಾನುವಾರ ಸಂಭವಿಸಿತು. ವಿಜಯಪುರದಿಂದ ಬಿಂಜಲಭಾವಿ ಗ್ರಾಮಕ್ಕೆ ಬಿಂಜಲಭಾವಿ ಗ್ರಾಮದ 12 ಜನರು ಖಾಸಗಿ ಕಾರ್ಯಕ್ರಮಕ್ಕೆ ಕ್ರೂಸರ್ ಮೂಲಕ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಬೈರವಾಡಿ ಕ್ರಾಸ್ ಬಳಿ ವಾಹನ ಕಂದಕಕ್ಕೆ ಬಿದ್ದಿದೆ.
ಮೃತಪಟ್ಟವರನ್ನು ಹುಸೇನಪಾಶಾ ಮುಜಾವರ (40) ಹಾಗೂ ಅಸ್ಲಂ ನದಾಫ್ (20) ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರ ಹಿಪ್ಪರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Watch Video - ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ.. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಚಿಕ್ಕಬಳ್ಳಾಪುರದಲ್ಲಿ ಅಪಘಾತ, ಇಬ್ಬರು ಸಾವು: ಎರಡು ದ್ವಿಚಕ್ರ ವಾಹನಗಳಿಗೆ ಟೆಂಪೋ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಬಳಿ ಭಾನುವಾರ ನಡೆದಿದೆ. ಬೈಕ್, ಸ್ಕೂಟಿ ಹಾಗೂ ಟೆಂಪೋ ನಡುವೆ ಸರಣಿ ಅಪಘಾತ ನಡೆದಿದೆ. ಬೆಂಕಿ ಕಾಣಿಸಿಕೊಂಡು ಟೆಂಪೋ ಹಾಗು ಬೈಕ್ ಸುಟ್ಟು ಕರಕಲಾಗಿವೆ. ದ್ವಿಚಕ್ರದಲ್ಲಿ ತೆರಳುತ್ತಿದ್ದ ದಂಪತಿ ಕುರುಬೂರು ಗ್ರಾಮದ ಶ್ಯಾಮಲಾ (30), ಶ್ರೀರಾಮ್ (35) ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಂತರ ಬೈಕ್‌ಗಳಿಗೆ ಗುದ್ದಿದ ಟೆಂಪೋ ನಂತರ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಟೆಂಪೋ ಚಾಲಕ ಪಾರಾಗಿದ್ದು, ಪರಾರಿಯಾಗಿದ್ದಾನೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ವಾರಾಂತ್ಯದಲ್ಲಿ ಎರಡು ಕಾರುಗಳು ಅಪಘಾತಕ್ಕೀಡಾದ ಪ್ರತ್ಯೇಕ ಘಟನೆಗಳು ತಡರಾತ್ರಿ ಆಡುಗೋಡಿಯ ಪಾಸ್‌ಪೋರ್ಟ್ ಕಚೇರಿ ರಸ್ತೆ ಹಾಗೂ ಆರ್.ಆರ್.ನಗರದ ಲಲಿತ್ ಸ್ಕೂಲ್ ಬಳಿ ನಡೆದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾದ ಘಟನೆ ಆಡುಗೋಡಿಯ ಪಾಸ್‌ಪೋರ್ಟ್ ಕಚೇರಿ ಬಳಿ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂದಿನ ಎರಡೂ ಏರ್ ಬ್ಯಾಗ್ಸ್ ಓಪನ್ ಆಗಿವೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರು, ಓರ್ವ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಸ್ಥಳಕ್ಕೆ ಆಡುಗೋಡಿ ಪೊಲೀಸರು ಭೇಟಿ ನೀಡಿದ್ದಾರೆ.
ಇನ್ನೊಂದು ಘಟನೆಯಲ್ಲಿ ವೇಗವಾಗಿ ಬಂದ ಹ್ಯೂಂಡೈ ಕ್ರೆಟಾ ಕಾರು ಮರಕ್ಕೆ ಡಿಕ್ಕಿಯಾದ ಘಟನೆ ತಡರಾತ್ರಿ ಆರ್.ಆರ್.ನಗರದ ಲಲಿತ್ ಶಾಲೆ ಬಳಿ ನಡೆದಿದೆ. ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದ್ದು, ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ಇದನ್ನೂ ಓದಿ: ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ.. ಆರು ಮಂದಿ ಸ್ಥಳದಲ್ಲೇ ಸಾವು