ವಿಜಯಪುರ : ನಗರದಿಂದ ಹೊರಡುವ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಕಡಿದು ಕೊಂಡಿರುವ ಘಟನೆ ನಗರದ ವಜ್ರಹನುಮಾನ್ ರೈಲ್ವೇ ಗೇಟ್ ಬಳಿ ಸಂಜೆ 5 ಗಂಟೆ ಸುಮಾರಿಗೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಈ ರೈಲು ಸಂಜೆ ವಿಜಯಪುರದಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಹೊರಡಬೇಕಾಗಿತ್ತು. 5 ಗಂಟೆ ಸುಮಾರಿಗೆ ವಿಜಯಪುರ ರೈಲು ನಿಲ್ದಾಣದಿಂದ ಹೊರಟು, ಇಬ್ರಾಹಿಂಪುರ ಮಾರ್ಗವಾಗಿ ವಜ್ರಹನುಮಾನ್ ರೈಲ್ವೇ ಗೇಟ್ ಬಳಿ ಬಂದಾಗ ರೈಲು ಬೋಗಿಯ ಕೊನೆಯ ಎರಡು ಜನರಲ್ ಬೋಗಿಯ ಕೊಂಡಿ ಕಳಚಿದೆ. ಇದರಿಂದ ಪ್ರಯಾಣಿಕರು ಭಯ ಭೀತರಾಗಿದ್ದು, ಬೋಗಿಯಿಂದ ಇಳಿದಿದ್ದಾರೆ.
ಎರಡು ಬೋಗಿ ಸಂಪರ್ಕ ಕಳೆದುಕೊಂಡ ಮೇಲೆ ಎಂಜಿನ್ ಹಾಗೂ ಅದಕ್ಕೆ ಜೋಡಿಸಿದ ಬೋಗಿಗಳು ಮುಂದೆ ಹೋಗಿ ನಿಂತಿವೆ. ಈ ವೇಳೆ, ರೈಲು ಗೇಟ್ ಹಾಕಲಾಗಿತ್ತು. ಸದ್ಯ ಹೊಸ ಕೊಂಡಿ ಹಾಕಿ ಅಥವಾ ಕಟ್ ಆದ ಕೊಂಡಿ ದುರಸ್ತಿಗೊಳಿಸಿ ಶೀಘ್ರ ರೈಲು ಓಡಿಸುವ ವ್ಯವಸ್ಥೆ ಮಾಡುವುದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೆ ರೈಲು ಸಂಚಾರ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಈ ಘಟನೆ ನೋಡಲು ಜನ ತಂಡೋಪ ತಂಡ ಆಗಮಿಸುತ್ತಿದೆ.