ವಿಜಯಪುರ: ಅವಳಿ ಜಿಲ್ಲೆಯ ಮಹಾತ್ವಾಕಾಂಕ್ಷಿ ಗೃಹ ಸಚಿವ ಎಂ ಬಿ ಪಾಟೀಲ್‍ರ ಕನಸಿನ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆಯ ಜಾಕ್‌ವೆಲ್‍ನಿಂದ ನೀರು ಹರಿಸುವ ಕಾರ್ಯ ಆರಂಭಗೊಂಡಿದೆ.
ಜಮಖಂಡಿ ತಾಲೂಕಿನ ಕವಟಗಿ ಹತ್ತಿರ ಕೃಷ್ಣಾ ನದಿಗೆ ನಿರ್ಮಿಸಿರುವ ಜಾಕ್‌ವೆಲ್‍ನಿಂದ ನೀರೆತ್ತಿ, ತಿಕೋಟಾದ ಡೆಲೆವೆರಿ ಛೇಂಬರ್-2ರವರೆಗೆ ಪೈಪ್‍ಲೈನ್ ಮೂಲಕ 45ಕಿ.ಮೀ ಪಂಪ್ ಮಾಡಿ ಅಲ್ಲಿಂದ ಕಾಲುವೆಗಳ ಮೂಲಕ ತಿಕೋಟಾ ಭಾಗದಲ್ಲಿ ಈಗಾಗಲೇ ನಿರ್ಮಾಣಗೊಳ್ಳುತ್ತಿರುವ ಕಾಲುವೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಆರಂಭಿಕವಾಗಿ 16500 ಎಚ್.ಪಿ ಶಕ್ತಿಯ ಒಂದು ಮೋಟಾರನ್ನು ಮಾತ್ರ ಚಾಲನೆಗೊಳಿಸಿದ್ದು, ಕಾಲುವೆ ಜಾಲ ಸಂಪೂರ್ಣಗೊಂಡಾಗ ಈ ರೀತಿಯ 16500 ಹೆಚ್‌ಪಿಯ 4 ಮೋಟಾರ್‌ಗಳು ಏಕಕಾಲದಲ್ಲಿ ಆಂರಂಭಗೊಳ್ಳುತ್ತವೆ.
ತಿಕೋಟಾದ ಡೆಲೆವರಿ ಛೇಂಬರ್‌ನಿಂದ ನೀರು ಹರಿಯುತ್ತಿದ್ದಂತೆಯೇ ತಿಕೋಟಾ ಸುತ್ತಮುತ್ತಲಿನ ಗ್ರಾಮಸ್ಥರು ಕಾಲುವೆಯತ್ತ ಆಗಮಿಸಿ, ಜಿಲ್ಲೆಯ ಅತ್ಯಂತ ಎತ್ತರದ ಪ್ರದೇಶವಾದ ಈ ಭಾಗಕ್ಕೆ ನೀರು ಹರಿಸಲು ಕಾರಣರಾದ ಗೃಹ ಸಚಿವ ಎಂ ಬಿ ಪಾಟೀಲ ಅವರ ಕಾರ್ಯವನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.