ವಿಜಯಪುರ : ಅಕ್ಕ-ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಒಮಿಕ್ರಾನ್ ಹೆಚ್ಚಾಗುತ್ತಿದೆ. ಆ ರಾಜ್ಯಗಳಿಂದ ಬರುವ ಜನರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಈ ಹಿನ್ನೆಲೆ ನಾಳೆ ತಜ್ಞರು ಹಾಗೂ ಹಿರಿಯ ಸಚಿವರ ಜತೆ ಸಭೆ ನಡೆಸಿ ರೋಗ ಹರಡದಂತೆ ಮುನ್ನೆಚ್ಚರಿಕಾ ಕ್ರಮಕೈಗೊಳ್ಳುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಿಎಂ ಹೇಳಿದರು.
ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಹಿನ್ನೆಲೆ ಶಾಸ್ತ್ರಿ ಮಾರುಕಟ್ಟೆಯಲ್ಲಿರುವ ವಾಜಪೇಯಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯಕ್ಕೆ ಬರುವ ಎಲ್ಲರೂ ಕಡ್ಡಾಯವಾಗಿ ನೆಗೆಟಿವ್ ವರದಿ ಹೊಂದಿರಬೇಕು.
ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿ ಕೊಂಡಿರಬೇಕು ಎಂದು ಸೂಚನೆ ನೀಡಲಾಗಿದೆ. ನಾಳೆ ನಡೆಯುವ ಸಭೆಯಲ್ಲಿ ಹೊಸ ವರ್ಷದ ಆಚರಣೆ ಸೇರಿದಂತೆ ರೋಗ ತಡೆಗಟ್ಟಲು ಕೈಗೊಳ್ಳುವ ಕ್ರಮಗಳ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಜಾರಿ ಮಾಡುವ ನಿಯಮಗಳನ್ನು ಸಾರ್ವಜನಿಕರು ಚಾಚು ತಪ್ಪದೆ ಪಾಲಿಸಬೇಕು ಎಂದ ಅವರು, ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವ ಕುರಿತು ನಾಳೆ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು.
ಅಭಿವೃದ್ಧಿ ಕಾಮಗಾರಿಗೆ ಚಾಲನೆ : ಜಿಲ್ಲೆಯ ಅಭಿವೃದ್ಧಿಗೆ ವೇಗ ನೀಡಲಾಗುವುದು. ಮುಂದಿನ ದಿನಗಳಲ್ಲಿ ನಗರದಲ್ಲಿ ಬಡವರಿಗಾಗಿ ಆರು ಸಾವಿರ ಮನೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಇದರ ಜತೆಗೆ 240 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ವಿವಿಧ ತಾಲೂಕಿನಲ್ಲಿ ಸಹ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.